ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋಲಾಗಿದ್ದು ಮೈತ್ರಿಯಿಂದ ಅಂತ ಈಗ ಹೇಳೋದು ಸರಿಯಲ್ಲ. ಮೈತ್ರಿ ಆದಾಗಲೇ ಬೇಡ ಅಂತ ಹೇಳಬೇಕಿತ್ತು. ಕಾರ್ಯಕರ್ತರ ಮಧ್ಯೆ ಮೈತ್ರಿ ಆಗದಿರುವುದೂ ಸೋಲಿಗೆ ಕಾರಣ ಇರಬಹುದು ಎಂದು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮೈತ್ರಿಯೇ ಸೋಲಿಗೆ ಕಾರಣ ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ, ಮುನಿಯಪ್ಪ ಮತ್ತಿತರರು ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಕೇಳಿದ್ದೇನೆ. ಆದ್ರೆ, ಅದನ್ನು ಸೋಲಾದ ನಂತರ ಹೇಳೋದು ಸರಿಯಲ್ಲ. ಕಾಂಗ್ರೆಸ್ ಈಗ ಸೋತಿರಬಹುದು. ಆದರೆ ಮತ್ತೆ ಗೆದ್ದು ಬರುತ್ತೆ. ಜನರಿಗೆ ಕಾಂಗ್ರೆಸ್ಸೇ ಪರ್ಯಾಯ. ಮೋದಿ ನಂಬಿ ಹೆಚ್ಚು ಸಮಯ ಬದುಕಲು ಸಾಧ್ಯವಿಲ್ಲ. ಮತ್ತೆ ಜನ ಕಾಂಗ್ರೆಸ್ ನಂಬಿ ಬರುತ್ತಾರೆ.
1967 ರಲ್ಲಿ ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಸೋತಿತ್ತು. ಹಾಗಂತ ಮುಳುಗಿತ್ತಾ ಕಾಂಗ್ರೆಸ್, ಮತ್ತೆ ಗೆದ್ದು ಬರಲಿಲ್ವಾ ? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಮುಗಿಸಲು ಮೋದಿಯಿಂದಲೂ ಆಗಲ್ಲ. ಯಾರಿಂದಲೂ ಕಾಂಗ್ರೆಸ್ ಮುಗಿಸಲು ಆಗೋದಿಲ್ಲ. ಜನರಿಗೆ ಪರ್ಯಾಯ ಪಕ್ಷ ಕಾಂಗ್ರೆಸ್ ಆಗಿದೆ. ಎಲ್ಲರೂ ಸೋಲಿನ ಹೊಣೆ ಹೊತ್ಕೊಂಡಿದ್ದಾರೆ. ಮತ್ತೆ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬರಬೇಕು ಎಂದು ಸಲಹೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣಿಸುತ್ತಿದೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರು ಸೇರಿ ಸರ್ಕಾರದಲ್ಲಿ ಸಮನ್ವಯತೆಯನ್ನ ತರಬೇಕು. ಚುನಾವಣಾ ಸೋಲಿಗೆ ರಾಹುಲ್ ರಾಜೀನಾಮೆ ಕೊಡಲು ಮುಂದಾಗಿ ಅವರು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಬೇರೆಯವರು ಸಹ ಜವಾಬ್ದಾರಿ ನಿರ್ವಹಿಸಲಿ. ಸಮ್ಮಿಶ್ರ ಸರ್ಕಾರ ನಡೆಸುವುದು ಹೇಗೆ ಅನ್ನೋದು ಯುಪಿಎ ನೋಡಿ ಕಲಿಯಲಿ. ಹತ್ತು ವರ್ಷ ಅಧಿಕಾರ ನಡೆಸಿದ್ವಿ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುಪಿಎ ಸರ್ಕಾರ ಹತ್ತು ವರ್ಷ ಆಡಳಿತ ನಡೆಸಿದೆ. ಅದನ್ನ ನೋಡಿ ಸಮ್ಮಿಶ್ರ ಸಿಎಂ ಮತ್ತು ಸಿದ್ದರಾಮಯ್ಯ ಸಮನ್ವಯತೆ ಸಾಧಿಸಲಿ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಮಧ್ಯಂತರ ಚುನಾವಣೆಗಳು ಬರುತ್ತವೆ ಹೋಗ್ತವೆ. ಆದ್ರೆ ಮೈತ್ರಿ ನಡೆಸ್ಕೊಂಡು ಹೋದ್ರೆ ಚುನಾವಣೆ ಅಗತ್ಯ ಇಲ್ಲ ಎಂದು ದೇವೇಗೌಡರ ಮಾತಿಗೆ ಪ್ರತಿಕ್ರಿಯೆ ನೀಡಿದರು.