ಬೆಂಗಳೂರು : ಉಪಚುನಾವಣೆಯಲ್ಲಿ ಸೋಲುಂಡ ನಂತರ ತಟಸ್ಥವಾಗಿದ್ದ ಜೆಡಿಎಸ್ ಇದೀಗ ತನ್ನ ಕಾರ್ಯಚಟುವಟಿಕೆ ಆರಂಭಿಸಿದೆ.
ಪ್ರಾದೇಶಿಕ ಪಕ್ಷವಾಗಿರುವ ಜೆಡಿಸ್ ಅನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಪಣತೊಟ್ಟಿರುವ ನಾಯಕರು ರಾಜಕೀಯ ಕಸರತ್ತಿಗೆ ಮುಂದಾಗಿದ್ದಾರೆ. ಜೆಡಿಎಸ್ನಲ್ಲೂ ಬದಲಾವಣೆ ಗಾಳಿ ಬೀಸುತ್ತಿದ್ದು, ಆಹ್ವಾನದ ಮೇರೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಇಂದು ಮಾಜಿ ಕೇಂದ್ರ ಸಚಿವ ಮತ್ತು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಿ.ಎಂ. ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ದೇವೇಗೌಡರು ಚರ್ಚೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕ ಆರ್. ಮಂಜುನಾಥ್, ಮಾಜಿ ಶಾಸಕ ಸುರೇಶ್ ಬಾಬು ಸಹ ಇದ್ದರು.
ಓದಿ : ಕೋಡಿಹಳ್ಳಿ ಇಲ್ಲೊಂದು-ಅಲ್ಲೊಂದು ಮಾತಾಡೋದು ಸರಿಯಲ್ಲ : ಸಚಿವ ಆರ್.ಅಶೋಕ್
ಕುಮಾರಸ್ವಾಮಿ ಅವರು ಇತ್ತೀಚೆಗೆ ಇಬ್ರಾಹಿಂ ಅವರ ನಿವಾಸಕ್ಕೆ ತೆರಳಿ ಕೆಲಹೊತ್ತು ಚರ್ಚಿಸಿ ಪಕ್ಷಕ್ಕೆ ವಾಪಸ್ ಬರುವಂತೆ ಆಹ್ವಾನ ನೀಡಿದ್ದರು. ಇದೇ ವೇಳೆ, ಡಿ.15 ರ ನಂತರ ರಾಜ್ಯ ಪ್ರವಾಸ ಮಾಡಿ ನಿರ್ಧಾರ ತಿಳಿಸಲಾಗುವುದು ಎಂದು ಇಬ್ರಾಹಿಂ ಹೇಳಿದ್ದರು.
ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಬೆನ್ಸನ್ ಟೌನ್ನಲ್ಲಿರುವ ಸಿಎಂ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಪಕ್ಷ ತೊರೆಯದಂತೆ ಇಬ್ರಾಹಿಂ ಅವರಿಗೆ ಡಿಕೆಶಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ದೇವೇಗೌಡರನ್ನು ಇಬ್ರಾಹಿಂ ಭೇಟಿ ಮಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.