ಬೆಂಗಳೂರು : ಸೋನಿಯಾ ಗಾಂಧಿ ಓಲೈಕೆಗಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಹೇಳಿದರು.
ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ, 7,600 ಮನೆಗಳ ಕುಸಿತದ ಕುರಿತು ವರದಿ ತರಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಮುಂದಾಗಿದೆ ಎಂದರು.
ಈ ಹಿಂದೆ ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಟ್ಟು ರೈತಪರ ಎಂದು ಜನಮೆಚ್ಚುಗೆ ಗಳಿಸಿದ್ದ ನಮ್ಮ ಸರಕಾರ ಈಗ ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾದ 10 ಲಕ್ಷ ರೈತರ ಕುಟುಂಬಗಳಿಗೆ ಅತಿ ಹೆಚ್ಚು ಹಣ ಬಿಡುಗಡೆ ಮಾಡಲು ಮುಂದಾಗಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ತಿಳಿಸಿದರು.
ಕೇವಲ 48 ಗಂಟೆಗಳಲ್ಲಿ ಇದನ್ನು ಅನುಷ್ಠಾನ ಮಾಡುವುದಾಗಿಯೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಣ ಬಿಡುಗಡೆ ಮಾಡಿದ್ದು, ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷವು ಅಭಿನಂದಿಸುವುದಾಗಿ ತಿಳಿಸಿದರು.
ಮತಾಂತರ ತಡೆಯಲು ಸರ್ಕಾರದ ಕ್ರಮ
ಮತಾಂತರದ ಪಿಡುಗನ್ನು ನಿಯಂತ್ರಿಸಲು ಸರಕಾರ ಮುಂದಾಗಿರುವುದು ಅತ್ಯಂತ ಮಹತ್ವದ ಕ್ರಮವಾಗಿದೆ. ಕೆಲವು ಧರ್ಮಾಂಧರು ಉದ್ದೇಶ ಪೂರ್ವಕವಾಗಿ ಸಮಾಜದಲ್ಲಿ ರಾಷ್ಟ್ರಘಾತುಕ ಕೆಲಸ ಮಾಡುವ ದೃಷ್ಟಿಯಿಂದ ಮತಾಂತರ ಮಾಡುತ್ತಿದ್ದಾರೆ. ಇದನ್ನು ತಡೆಯಲು ಮಸೂದೆ ತಂದಿರುವುದು ಉತ್ತಮ ಕಾರ್ಯ.
ಲವ್ ಜಿಹಾದ್, ಮದುವೆಯಾದ ಬಳಿಕ ಐಸಿಸ್ ಚಟುವಟಿಕೆಯಂಥ ಕಾರ್ಯಕ್ಕೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ಆಮಿಷದಿಂದ ಮತಾಂತರ ತಡೆಯಲು ಸರಕಾರ ಮುಂದಾಗಿದೆ. ಕಾಂಗ್ರೆಸ್‍ನವರು ಇಂಥ ಮಸೂದೆಯನ್ನು ಅಧ್ಯಯನ ಮಾಡಿ ಪ್ರತಿಕ್ರಿಯೆ ಕೊಡಬೇಕು. ಕಾಂಗ್ರೆಸ್‍ನವರು ಹೋಂವರ್ಕ್ ಮಾಡುವುದಿಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ಆಕ್ಷೇಪಿಸಿದರು.
ಇದು ಯಾವುದೇ ಧರ್ಮದ ವಿರುದ್ಧ ಅಲ್ಲ:
ಇದು ಕ್ರಿಶ್ಚಿಯನ್ ಧರ್ಮ ಅಥವಾ ಒಂದು ಧರ್ಮವನ್ನು ಗುರಿಯಾಗಿ ಇಟ್ಟುಕೊಂಡ ಮಸೂದೆ ಅಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಸರಕಾರಗಳು ಇಂಥ ಮಸೂದೆಯನ್ನು ಈ ಹಿಂದೆ ಜಾರಿಗೊಳಿಸಿದ್ದವು. ಆಸೆ, ಆಮಿಷದಿಂದ ಮತ್ತು ಸೇವೆಯ ನೆಪದಲ್ಲಿ ಮತಾಂತರ ಮಾಡುವುದನ್ನು ತಡೆಯಲು ಈ ಮಸೂದೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಕೊಡಗಿನ ವಿರಾಜಪೇಟೆಯ ಇಂದಿರಾರನ್ನು ರಿಯಾಜ್ ಮದುವೆಯಾಗಿ ಆಯಿಷಾ ಎಂದು ಹೆಸರು ಬದಲಿಸಿ ಉಗ್ರವಾದಿ ಸಂಘಟನೆ ಇಂಡಿಯನ್ ಮುಜಾಹಿದೀನ್ ಕಾರ್ಯಕ್ಕೆ ಬಳಸಿದ್ದು ನಮ್ಮ ಕಣ್ಣ ಮುಂದಿದೆ. ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬರ ಮೊಮ್ಮಗನದೂ ಇದೇ ಮಾದರಿಯ ಪ್ರಕರಣ ವರದಿಯಾಗಿದೆ. ಎನ್‍ಐಎ ಬಂಧಿಸಿದಾಗ ಇದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಮತಾಂತರಕ್ಕೆ ಹಲವು ಸಂಘಟನೆಗಳ ಮೂಲಕ ಹಣ ಹರಿದು ಬರುತ್ತಿದೆ. ಮುರುಘಾ ಮಠದ ಸ್ವಾಮೀಜಿ ಮತಾಂತರದ ವಿರುದ್ಧ ಆತಂಕ ಸೂಚಿಸಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕರು ಮತ್ತು ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರು ಇದೇ ವಿಚಾರವಾಗಿ ಸರಕಾರಕ್ಕೇ ಪತ್ರ ಬರೆದಿದ್ದಾರೆ.
ಕ್ರಿಶ್ಚಿಯನ್ ಸಮುದಾಯದವರು ಬಡವರು, ದಲಿತರು, ಲಂಬಾಣಿ ಜನರನ್ನು, ಕುರುಬ ಸಮುದಾಯದವರು, ಒಕ್ಕಲಿಗರು, ವೀರಶೈವರು ಮತ್ತು ಲಿಂಗಾಯತರನ್ನು ಮತಾಂತರ ಮಾಡುತ್ತಿರುವ ಕುರಿತು ಮತ್ತು ಸಾಮಾಜಿಕ ಅಶಾಂತಿಗೆ ಕಾರಣ ಆಗುತ್ತಿರುವ ಕುರಿತು ಕಳವಳ ಸೂಚಿಸಿದ್ದಾರೆ. ಈ ಆಘಾತಕಾರಿ ವಿಚಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ವಿವರಿಸಿದರು. ಇದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ವಕ್ತಾರರಾದ ಗಿರಿಧರ್ ಉಪಾಧ್ಯಾಯ ಅವರು ಮಾತನಾಡಿ, ಪ್ರಾರ್ಥನೆ ಮತ್ತು ಸೇವೆಯ ನೆಪದಲ್ಲಿ ಮತಾಂತರಗಳು ನಡೆಯುತ್ತಿವೆ. ಕ್ರಿಶ್ಚಿಯನ್ನರು ಜನರಲ್ಲಿ ಮೂಢ ನಂಬಿಕೆಯನ್ನು ಬಿತ್ತಿ ಮತಾಂತರಕ್ಕೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕುಂಬಳಕಾಯಿ ಕಳ್ಳ ಎಂದೊಡನೆ ಕ್ರಿಶ್ಚಿಯನ್ನರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ ಎಂದು ಪ್ರಶ್ನಿಸಿದರು. ಬಲವಂತದ ಮತ್ತು ಆಮಿಷವೊಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದನ್ನೀಗ ಅನುಷ್ಠಾನಕ್ಕೆ ತರುತ್ತಿದೆ ಎಂದು ತಿಳಿಸಿದರು.