ಬೆಂಗಳೂರು: ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗವಿಯಪ್ಪ ಇಂದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
2018 ರಲ್ಲಿ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಅದುವರೆಗೂ ಕಾಂಗ್ರೆಸ್ನಲ್ಲಿದ್ದ ಗವಿಯಪ್ಪಗೆ ಟಿಕೆಟ್ ಮಿಸ್ ಆಗಿತ್ತು. ಕೈ ಪಕ್ಷದ ಮೇಲೆ ಮುನಿಸಿಕೊಂಡು ಪಕ್ಷ ತೊರೆದು ಬಿಜೆಪಿ ಸೇರಿದ್ದ ಹೆಚ್ಆರ್ ಗವಿಯಪ್ಪ ಅವರು ಆನಂದ್ ಸಿಂಗ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಆನಂದ್ ಸಿಂಗ್ ಮರಳಿ ಬಿಜೆಪಿ ಸೇರ್ಪಡೆಯಾಗಿ ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧಿಸಿ ಜಯಗಳಿಸಿದ್ದರು. ಇದೀಗ ಸಚಿವರೂ ಸಹ ಆಗಿದ್ದಾರೆ. ಆನಂದ್ ಸಿಂಗ್ ಬಿಜೆಪಿ ಸೇರಿದ್ದಕ್ಕೆ ಬಿಜೆಪಿಯಿಂದಲೂ ಅಂತರ ಕಾಪಾಡಿಕೊಂಡಿದ್ದ ಗವಿಯಪ್ಪ ಇದೀಗ ಕೈ ಹಿಡಿದಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಬಿ.ಕೆ ಹರಿಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಕ್ಷ ಸೇರ್ಪಡೆ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಗವಿಯಪ್ಪ ಕಾಂಗ್ರೆಸ್ ಸೇರ್ಪಡೆ ವಿರೋಧಿಸಿ ವಿಜಯನಗರದಲ್ಲಿ ಕೈ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಒಂದು ಚೇರ್ ಇರುತ್ತೆ. ಅದರಲ್ಲಿ ಒಬ್ಬರೇ ಕೂರೋಕೆ ಆಗೋದು. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದಿದ್ದಾರೆ. ಬ್ಲಾಕ್ಮೇಲೆ ಮಾಡಿ ರಾಜೀನಾಮೆ ಕೊಟ್ಟರೆ ಹೆದರಲ್ಲ. ಪಕ್ಷದ ಚೌಕಟ್ಟಿನಲ್ಲಿ ಇದ್ದರೆ ಇರಬಹುದು. ಇಲ್ಲವಾದರೆ ಡಿಪಾರ್ಚರ್ ದಾರಿ ಇದೆ. ಹೋಗಬಹುದು ಎಂದರು.
ಕಂಸಾಳೆ ಬಾರಿಸಿದ ಸಿದ್ದರಾಮಯ್ಯ: ಬಿಜೆಪಿ ಮಾಜಿ ಶಾಸಕ ಗವಿಯಪ್ಪ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ಬೆಂಬಲಿಗರ ಜೊತೆ ಕೆಪಿಸಿಸಿಗೆ ಆಗಮಿಸಿದ ಸಂದರ್ಭ ಜಾನಪದ ವಾದ್ಯಗಳ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಕೆಪಿಸಿಸಿ ಕಚೇರಿ ಮುಂದೆ ಡೊಳ್ಳು ಕುಣಿತ ನಡೆಯಿತು. ಕೆಪಿಸಿಸಿ ಕಚೇರಿಗೆ ಆಗಮಿಸಿದಾಗ ಸಿದ್ದರಾಮಯ್ಯರನ್ನು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭ ಕಂಸಾಳೆ ಬಾರಿಸುವ ಮೂಲಕ ಸಿದ್ದರಾಮಯ್ಯ ಗಮನ ಸೆಳೆದರು. ಆದರೆ, ಸುದ್ದಿಗೋಷ್ಠಿ ಬಳಿಕ ತರಾತುರಿಯಲ್ಲಿ ತೆರಳಿದ ಹಿನ್ನೆಲೆಯಲ್ಲಿ ಸೇರ್ಪಡೆ ಸಂದರ್ಭ ಅವರು ಉಪಸ್ಥಿತರಿರಲಿಲ್ಲ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಕೋಳಿವಾಡ ಹಗುರ ಮಾತು? ವಿಡಿಯೋ ವೈರಲ್