ಬೆಂಗಳೂರು: ಬೆಂಬಲಿಗರಿಂದ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆ ಬೇಸರಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯೂರೋಪ್ ಪ್ರವಾಸಕ್ಕೆ ತೆರಳುವ ಮನಸ್ಸು ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಲೋಕಸಭೆ ಚುನಾವಣೆ ಫಲಿತಾಂಶ ಬರುವರೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಡದಿರಲು ನಿರ್ಧರಿಸಿರುವ ರಮೇಶ್, ಅಲ್ಲಿಯವರೆಗೆ ತಮ್ಮ ಬೆಂಬಲಿಗ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ನಿರ್ಧರಿಸಿದ್ದರು. ಆದರೆ, ಕಾಂಗ್ರೆಸ್‍ನ ಅತೃಪ್ತ ಶಾಸಕರಾಗಿ ಗುರುತಿಸಿಕೊಂಡಿರುವ ಬಿ. ನಾಗೇಂದ್ರ, ಮಹೇಶ್ ಕುಮಟಳ್ಳಿ ಸೇರಿದಂತೆ ಯಾವೊಬ್ಬ ಮುಖಂಡರೂ ಇವರ ಜತೆ ಮಾತುಕತೆಗೆ ಆಗಮಿಸಿಲ್ಲ. ರಾಜೀನಾಮೆ ನೀಡಿಯೇ ತವರಿಗೆ ವಾಪಾಸಾಗುತ್ತೇನೆ ಎಂದು ಹೇಳಿ ಗೋಕಾಕ್‍ನಿಂದ ಬೆಂಗಳೂರಿಗೆ ಆಗಮಿಸಿರುವ ರಮೇಶ್ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ತವರಿಗೆ ಮರಳಲಾಗದೇ, ಬೆಂಬಲಿಗರೂ ಕೈಗೆ ಸಿಗದೇ ಸಾಕಷ್ಟು ಆತಂಕಕ್ಕೆ ಎದುರಾಗಿದ್ದಾರೆ. ದಿನದಿಂದ ದಿನಕ್ಕೆ ತಮ್ಮ ವರ್ಚಸ್ಸು ಕಡಿಮೆಯಾಗುತ್ತಿದೆ. ಬೆಂಬಲಿಗರು ಭೇಟಿ ಮಾಡದೇ ಅವಮಾನವಾಗುತ್ತಿದ್ದು, ಇದರಿಂದ ದೂರವಾಗಲು ಯೂರೋಪ್‍ನತ್ತ ಪಾದ ಬೆಳೆಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ವಾರದಿಂದ ಭೇಟಿಯಿಲ್ಲ:
ರಮೇಶ್ ಬೆಂಗಳೂರಿಗೆ ಆಗಮಿಸಿ ಒಂದು ವಾರವಾಗುತ್ತಾ ಬಂದಿದ್ದು, ಇದುವರೆಗೂ ಯಾವೊಬ್ಬ ಕಾಂಗ್ರೆಸ್ ಶಾಸಕರು ಅಥವಾ ಅತೃಪ್ತ ನಾಯಕರು ಇವರನ್ನು ಭೇಟಿ ಮಾಡಿಲ್ಲ. ಅದರ ಜತೆ ಇವರ ಮನವೊಲಿಸುವ ಮಾತನ್ನಾಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಭೇಟಿ ಮಾಡಿಲ್ಲ. ರಮೇಶ್ ಮಾತ್ರ ಮನೆಯಿಂದ ಆಗಾಗ ಹೊರಹೋಗಿ ವಾಪಾಸಾಗುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ ಇವರ ಭವಿಷ್ಯದ ವಿಚಾರದಲ್ಲಿ ಯಾವುದೇ ಹೊಸ ಬೆಳವಣಿಗೆ ಕಾಣಿಸುತ್ತಿಲ್ಲ.
ಉಮೇಶ್ ಜಾದವ್ ಮಾದರಿಯಲ್ಲಿ ಇವರು ಕೂಡ ಒಬ್ಬಂಟಿಯಾಗಿ ಬಿಜೆಪಿ ಸೇರುವ ಅನಿವಾರ್ಯ ಎದುರಾಗಿದೆ. ಬೆಂಬಲಿಗರಿಲ್ಲದೇ ತೆರಳಿದರೆ ಬೆಲೆ ಇರಲ್ಲ. ಉಮೇಶ್ ಲೋಕಸಭೆ ಚುನಾವಣೆ ಸ್ಪರ್ಧೆ ದೃಷ್ಟಿಯಿಂದ ತೆರಳಿದ್ದರು. ಆದರೆ, ರಮೇಶ್ ಯಾವುದೇ ನಿರೀಕ್ಷೆ ಇಲ್ಲದೇ ಹೋಗಬೇಕಾಗಿದೆ. ರಾಜೀನಾಮೆ ನೀಡಿ ಮತ್ತೆ ಗೆಲ್ಲುವುದು ಕೂಡ ಕಷ್ಟವಾಗಿದೆ.
ಫಲಿತಾಂಶ ನಂತರ ನಿರ್ಧಾರ:
ಇದರಿಂದ ಲೋಕಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು, ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಿಲ್ಲಾ ಮಟ್ಟದಲ್ಲಿ ಯಾವುದಾದರೂ ಉನ್ನತ ಹುದ್ದೆ ಸಂಪಾದಿಸಿಕೊಳ್ಳುವ ಅವಕಾಶ ಇರುತ್ತದೆ. ಆದ್ದರಿಂದ ಫಲಿತಾಂಶದವರೆಗೆ ಕಾದು ನೋಡಿ ನಂತರ ನಿರ್ಧರಿಸೋಣ. ಒಂದೊಮ್ಮೆ ಕೇಂದ್ರದಲ್ಲಿ ಬೇರೆಯದೇ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಬಿಡುವ ನಿರ್ಧಾರ ಕೈಬಿಟ್ಟು, ಪಕ್ಷದಲ್ಲಿಯೇ ಉಳಿಯುವ ತೀರ್ಮಾನ ಕೂಡ ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಇದರಿಂದ ಫಲಿತಾಂಶದವರೆಗೆ ಎದುರಾಗುವ ಆತಂಕ, ಗೊಂದಲ, ಪ್ರಶ್ನೆಗಳು, ಅನುಮಾನಗಳಿಗೆ ತೆರೆ ಎಳೆಯುವ ಉದ್ದೇಶದಿಂದ ವಿದೇಶಕ್ಕೆ ಹಾರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.