ಬೆಂಗಳೂರು : ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಇಂದು ನಾಮಪತ್ರ ಸಲ್ಲಿಸಿದರು.
ವಿಧಾನಸೌಧದಲ್ಲಿ ಸಹಾಯಕ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಬಾಬುರಾವ್ ಚಿಂಚನಸೂರ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಮೊದಲ ನಾಮಪತ್ರ ಸಲ್ಲಿಸುವಾಗ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರಾದ ಉಮೇಶ್ ಜಾಧವ್ ಮತ್ತು ಪರಿಷತ್ ಸದಸ್ಯ ರವಿಕುಮಾರ್ ಅವರು ಉಪಸ್ಥಿತರಿದ್ದರು. ಎರಡನೇ ನಾಮಪತ್ರ ಸಲ್ಲಿಸುವಾಗ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರು, ರಾಜಕುಮಾರ್ ಪಾಟೀಲ್ ಮತ್ತು ಶರಣು ಸಲಗಾರ ಮತ್ತಿತರರು ಇದ್ದರು.
ಖಾಲಿ ಇರುವ ಒಂದು ಸ್ಥಾನಕ್ಕೆ ಆಗಸ್ಟ್ 11 ರಂದು ಉಪಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. ಒಂದು ವೇಳೆ ಯಾರೂ ನಾಮಪತ್ರ ಸಲ್ಲಿಸದಿದ್ದರೆ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಓದಿ : ನಮ್ಮದು ರಾಷ್ಟ್ರೀಯ ಪಕ್ಷ, ಬೇಧ ಭಾವ ಮಾಡುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ