ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇಸ್ರನ್ನ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿ, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪೊಲೀಸ್ ತನಿಖಾ ತಂಡದ ಮಾಹಿತಿ ಪ್ರಕಾರ ಇಂದು ಕೆಲ ಎವಿಡೆನ್ಸ್ ದೃಢಪಡಿಸಿಕೊಳ್ಳಲು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಸದ್ಯ ಸಂಪತ್ ಅವರ ಪಿಎ ಅರುಣ್ ಹೇಳಿಕೆಯ ಎವಿಡೆನ್ಸ್ ದೃಢವಾದ ಮೇಲೆ ಮತ್ತೊಮ್ಮೆ ಸಂಪತ್ ರಾಜ್ ಹಾಗೂ ಜಾಕೀರ್ ಅವರನ್ನು ವಿಚಾರಣೆ ನಡೆಸಲಿದ್ದಾರೆ.
ಸಂಪತ್ ರಾಜ್ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕೇಸ್ ತನಿಖಾ ಹಂತದಲ್ಲಿದೆ. ನಾನೇನು ಹೇಳಲ್ಲ, ಹಾಗೆ ಪಿಎ ಅರುಣ್ ಬಗ್ಗೆ ನಾನು ಮಾತನಾಡಲ್ಲ. ಮತ್ತೊಮ್ಮೆ ವಿಚಾರಣೆಗೆ ಕರೆದ್ರೆ ಬರ್ತೀವಿ. ಒಳಗೆ ನಡೆದ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲ್ಲ. ಇದೆಲ್ಲಾ ಕಾನ್ಫಿಡೆನ್ಶಿಯಲ್. ಹಾಗಾಗಿ ನಾನು ಏನೂ ಮಾತಾಡಲ್ಲ ಎಂದಿದ್ದಾರೆ.
ಕಾರ್ಪೊರೇಟರ್ ಜಾಕೀರ್ ಮಾತನಾಡಿ, ಘಟನೆಗೂ ನನಗೂ ಸಂಬಂಧವಿಲ್ಲ, ವಿಚಾರಣೆಗೆ ಕರೆದಿದ್ದಕ್ಕೆ ಇಲ್ಲಿಗೆ ಬಂದಿದ್ದೆ. ನನ್ನ ಪಾತ್ರ ಇದರಲ್ಲಿ ಇಲ್ಲ, ನಾಯಕರು ಏನು ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೈಯೆಸ್ಟ್ ಲೀಡ್ನಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಾನೇಕೆ ಅವರಿಗೆ ಹೀಗೆ ಮಾಡಲಿ? ಮುಂದೆ ವಿಚಾರಣೆಗೆ ಕರೆದ್ರೆ ಬರುವುದಾಗಿ ತಿಳಿಸಿದ್ದೇನೆ. ಸದ್ಯ ಜಾಕೀರ್ ಹಾಗೂ ಸಂಪತ್ ರಾಜ್ ಇಬ್ಬರ ತನಿಖೆ ಪ್ರಾಥಮಿಕವಾಗಿ ಮುಗಿದಿದ್ದು, ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ವಶಕ್ಕೆ ಪಡೆದಿರುವ ಅರುಣ್ ಹಿನ್ನೆಲೆ:
43 ವರ್ಷದ ಅರುಣ್ ಕ್ಲಾಸ್ ಒನ್ ಕಾಂಟ್ರಾಕ್ಟರ್ ಆಗಿದ್ದಾನೆ. ಈತ ಕಳೆದ 9 ವರ್ಷಗಳಿಂದ ಸಂಪತ್ ರಾಜ್ರೊಂದಿಗೆ ಇದ್ದಾನೆ. ಮೂಲತಃ ತಮಿಳುನಾಡಿನ ಹೊಸೂರು ಭಾಗದವನಾದ ಅರುಣ್, ಗಲಭೆ ದಿನ ಮಾಸ್ಟರ್ ಪ್ಲಾನ್ ಮಾಡಿದ್ದ. ಗಲಭೆ ದಿನ ಅರುಣ್ ಮೊಬೈಲ್ನಿಂದ ನಾರ್ಮಲ್ ಕಾಲ್ ಹೋಗಿದ್ದು, ಒಂದೋ ಎರಡು ಅಷ್ಟೇ. ಆದ್ರೆ ವಾಟ್ಸ್ ಆ್ಯಪ್ ಕಾಲ್ನಲ್ಲಿ ಸಾಕಷ್ಟು ಕರೆ ಮಾಡಿದ್ದಾನೆ ಎನ್ನಲಾಗ್ತಿದೆ. ಸದ್ಯ ಸಿಸಿಬಿ ಅಧಿಕಾರಿಗಳು ಈ ಕರೆ ಯಾರಿಗೆ ಮಾಡಿದ್ದು, ಯಾರು ನಿನ್ನ ಜೊತೆ ವಾಟ್ಸಪ್ ಕಾಲ್ನಲ್ಲಿ ಮಾತನಾಡಿದ್ರು ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.