ಬೆಂಗಳೂರು: ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ಸುಧಾರಣೆಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಈಗ ಸಿದ್ದರಾಮಯ್ಯ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ತಮ್ಮ ಆರೋಗ್ಯ ಸುಧಾರಣೆಗೆ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯಾದ್ಯಂತ ಅಭಿಮಾನಿಗಳು ನನ್ನ ಆರೋಗ್ಯ ಸುಧಾರಣೆಯಾಗುವಂತೆ ಹರಕೆ, ಪೂಜೆಗಳನ್ನು ಸಲ್ಲಿಸಿದ್ದಾರೆ, ಕೆಲವರು ಆಸ್ಪತ್ರೆಗೆ ಬಂದು ಪ್ರಸಾದವನ್ನೂ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಕಂಡು ಮಾತು ಹೊರಡುತ್ತಿಲ್ಲ. ನಿಮ್ಮೆಲ್ಲರಿಗೂ ಧನ್ಯವಾದಗಳು. ಜನಸೇವೆಯಲ್ಲಿರುವ ವ್ಯಕ್ತಿ ಇದಕ್ಕಿಂತ ಹೆಚ್ಚಿನದನ್ನು ಏನು ನಿರೀಕ್ಷಿಸಲು ಸಾಧ್ಯ? ಎಂದಿದ್ದಾರೆ.
ನಾನು ಆಸ್ಪತ್ರೆಯಲ್ಲಿದ್ದಾಗ ವಿವಿಧ ಸಮುದಾಯಗಳ ಮಠಾಧೀಶರು ಹಾಗೂ ಪಕ್ಷಾತೀತವಾಗಿ ಹಲವು ನಾಯಕರು ನನ್ನನ್ನು ಭೇಟಿಯಾಗಿ ಧೈರ್ಯತುಂಬಿ, ಗುಣಮುಖರಾಗುವಂತೆ ಹಾರೈಸಿದ್ದಾರೆ. ಮನುಷ್ಯತ್ವವನ್ನು ಮೀರಿದ ಸಿದ್ಧಾಂತ ಜಗತ್ತಿನಲ್ಲೇ ಇಲ್ಲ. ಕಷ್ಟ ಕಾಲದಲ್ಲಿ ಜೊತೆಯಾದವರೆಲ್ಲರಿಗೂ ನಾನು ಕೃತಜ್ಞ ಎಂದು ಕೂಡ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದು ಮನೆಗೆ ಮರಳುತ್ತಿದ್ದೇನೆ. ಹಿಂದಿನಂತೆ ಕೆಲಸ ಕಾರ್ಯಗಳನ್ನು ಕೈಗೊಳ್ಳುವಷ್ಟು ನನ್ನ ಆರೋಗ್ಯ ಸದೃಢವಾಗಿದೆ. ಯಾವ ಆತಂಕವೂ ಬೇಡ. ನಾನು ಮೊದಲಿನಂತೆ ಸಕ್ರಿಯವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ವಿವರಿಸಿದ್ದಾರೆ.