ಬೆಂಗಳೂರು: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಅಲಿಯಾಸ್ ಆಲೂರು ಮಲ್ಲು ಮತ್ತು ಬಿಜೆಪಿ ಅಭ್ಯರ್ಥಿಯಾದ ಸಚಿವ ವಿ. ಸೋಮಣ್ಣ ನಡುವಿನ ಸಂಭಾಷಣೆಯ ಎನ್ನಲಾದ ಆಡಿಯೋ ಹೊರ ಬಂದಿರುವ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸೋಮಣ್ಣ ಅವರು ಖಾಸಗಿ ಕಾರಿಗೆ ಗೂಟ ಹಾಕಿ ಕೊಡುತ್ತಾರೋ ಗೊತ್ತಿಲ್ಲ. ಇಂತಹ ಆಮಿಷಗಳೆಲ್ಲ ಈಗ ಉಪಯೋಗಕ್ಕೆ ಬರಲ್ಲ ಎಂದು ಹೆಚ್ಡಿಕೆ ಹೇಳಿದ್ದಾರೆ.
ಇಲ್ಲಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ನಿವಾಸದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮೇ 13ರಂದು ಬಿಜೆಪಿಯ ಶವಯಾತ್ರೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಇತ್ತ, ಸೋಮಣ್ಣ ಯಾವ ಗೂಟದ ಕಾರು ಕೊಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು. ಅಲ್ಲದೇ, ಆಡಿಯೋದಲ್ಲಿ ಬಳಕೆ ಮಾಡಲಾದ ಪದಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮಗೆ ಅವರ (ಸೋಮಣ್ಣ) ಆ ಭಾಷೆಗಳು ಗೊತ್ತಾಗಲ್ಲ. ಆದರೆ, ಇಂತಹ ಮಾತುಗಳಿಂದ ಅವರು ಆತಂಕಕ್ಕೆ ಒಗಾಗಿರುವುದು ಸ್ಪಷ್ಟವಾಗುತ್ತದೆ. ಇಂತಹ ಪ್ರಕರಣಗಳಿಂದ ರಾಷ್ಟ್ರೀಯ ಪಕ್ಷಗಳಲ್ಲಿ ಇರುವ ಆತಂಕವನ್ನೂ ಸಹ ಕಾಣಬಹುದು ಎಂದು ಕುಟುಕಿದರು.
ಮುಂದುವರೆದು, ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನ ಜೆಡಿಎಸ್ ಗೆಲ್ಲುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂತ ಅಧಿಕ ಸ್ಥಾನಗಳ ಅಂತರ ಇರುತ್ತದೆ. ನಾನು ಏನೂ 123 ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕೆ ಹಣದ ಬಲ ಕಡಿಮೆ ಆಗಬಹುದು. ಆದರೆ, ಆ ಪಕ್ಷಗಳಷ್ಟು ಆರ್ಥಿಕ ಸಂಪೂನ್ಮೂಲ ಇದ್ದಿದ್ದರೆ ಇವತ್ತೇ 150 ಸ್ಥಾನ ಗೆಲ್ಲುತ್ತೇವೆ ಎಂದು ಘೋಷಣೆ ಮಾಡುತ್ತಿದ್ದೆ. ಈಗಲೂ ನನಗೆ 123 ಸ್ಥಾನ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಇದನ್ನೂ ಓದಿ: ನಗು ನಗುತ್ತಲೇ ಮುಖಾಮುಖಿಯಾದ ಸಿದ್ದರಾಮಯ್ಯ - ಬೊಮ್ಮಾಯಿ... ವಿಡಿಯೋ ನೋಡಿ
ಮತ್ತೊಂದೆಡೆ, ಇದಕ್ಕೂ ಮುನ್ನ ಮೈಸೂರಿನಲ್ಲಿ ಮಾತನಾಡಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಚುನಾವಣಾ ಅಕ್ರಮಗಳ ಬಗ್ಗೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಚಿವ ವಿ. ಸೋಮಣ್ಣ ನಡುವಿನ ಸಂಭಾಷಣೆಯ ಆಡಿಯೋ ಬಗ್ಗೆ ಇಂದು ಸಂಜೆ ವೇಳೆಗೆ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.
ಇನ್ನು, ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಸಚಿವ ಸೋಮಣ್ಣ ಕರೆ ಮಾಡಿ, ನಾಮಪತ್ರ ವಾಪಸ್ ಪಡೆಯುವಂತೆ ಅಮಿಷವೊಡ್ಡಿದ್ದರು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಂಗಳವಾರ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, ''ಬಿಜೆಪಿಯ ಹರಕೆಯ ಕುರಿಯಾಗಿರುವ ಸೋಮಣ್ಣ ಎರಡೂ ಕಡೆ ಬಲಿಯಾಗುವ ಭಯದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ! ಜೆಡಿಎಸ್ ಅಭ್ಯರ್ಥಿಯಲ್ಲಿ ಕೈಮುಗಿಯುತ್ತೇನೆ ನಾಮಪತ್ರ ವಾಪಸ್ ತಗೊ, ಗೂಟದ ಕಾರು ಕೊಡಿಸುತ್ತೇನೆ ಎಂದು ಬೇಡುತ್ತಾ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಬಿಜೆಪಿಗೆ ಅಡ್ಜಸ್ಟ್ಮೆಂಟ್ ರಾಜಕಾರಣವಿಲ್ಲದೇ ಗೆಲ್ಲುವ ಧೈರ್ಯ ಇಲ್ಲವೇಕೆ?'' ಎಂದು ಪ್ರಶ್ನೆ ಮಾಡಿತ್ತು.
ಇದನ್ನೂ ಓದಿ: ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ.. ಕಾಂಗ್ರೆಸ್ 150 ಸ್ಥಾನ ಪಡೆಯಲಿದೆ: ಡಿ.ಕೆ ಶಿವಕುಮಾರ್