ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈಗ ಕಾವೇರಿ, ಕನ್ನಡಿಗರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಘರ್ ವಾಪ್ಸಿಯದ್ದೇ ಚಿಂತೆಯಾಗಿದೆ. ವರ್ಗಾವಣೆ ದಂಧೆ ಹಾಗೂ ಕಮಿಷನ್ ವ್ಯವಹಾರ ಮರೆಮಾಚಲು ಘರ್ ವಾಪ್ಸಿ ನಾಟಕವಾಡುತ್ತಿದ್ದಾರೆ. ಈ ಚಿಂತೆಯಲ್ಲಿರುವ ಅವರು ನಮ್ಮನ್ನು ಸರ್ವಪಕ್ಷ ಸಭೆಗೆ ಕರೆಯುತ್ತಾರೋ ಇಲ್ವೋ ಗೊತ್ತಿಲ್ಲ. ಅವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಜರಗನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆ, ಕಮಿಷನ್ ವ್ಯವಹಾರ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಹಾದಿ ಬೀದಿಯಲ್ಲಿ ಜನರು ಛೀ.. ಥೂ.. ಎನ್ನುತ್ತಿದ್ದಾರೆ. ಇದನ್ನು ಮರೆ ಮಾಚಲು ಘರ್ ವಾಪ್ಸಿ ನಾಟಕ ಆಡುತ್ತಿದೆ ಎಂದು ದೂರಿದರು. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಅರ್ಧಕ್ಕರ್ಧ ಮುಗಿದು ಹೋಗುತ್ತದೆ. ಜೆಡಿಎಸ್ ಮುಗಿದೇ ಹೋಗುತ್ತದೆ ಅಂತಿದ್ದಾರೆ. ನಿನ್ನೆ ಮೊನ್ನೆ ಆಯ್ಕೆ ಆದವರು ಕೂಡ 10-20ಕ್ಕೂ ಹೆಚ್ಚು ಎಂಎಲ್ಎಗಳು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಆ ಪಕ್ಷದಲ್ಲಿ ಇರುವ ಶಾಸಕರ ತಳಮಳದ ಬಗ್ಗೆ ಅವರು ಮಾತನಾಡುತ್ತಿಲ್ಲ, ಯಾಕೆ ಎಂದು ಪ್ರಶ್ನಿಸಿದರು.
ಇವರಿಗೆ ಗೊತ್ತಿರಲಿ, ಯಾವುದೇ ಪಕ್ಷವನ್ನು ನಿರ್ನಾಮ ಮಾಡೋದು ಯಾರಿಂದಲೂ ಸಾಧ್ಯವಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಅವರ ಬಹುಮತದ ಸರ್ಕಾರ ಇತ್ತು. ಆಗಲೂ ಬಿಜೆಪಿ, ಜೆಡಿಎಸ್ನಿಂದ ಹಲವಾರು ಶಾಸಕರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡರು. ಆಮೇಲೆ 2004ರಲ್ಲಿ ಏನಾಯ್ತು?, 2008ರಲ್ಲಿ ಬಿಜೆಪಿಯವರು ಕೂಡ ಹಾಗೆಯೇ ಮಾಡಿದರು. 2013ಕ್ಕೆ ಏನಾಯಿತು? 2013ರಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಮ್ಮ ಶಾಸಕರಿಂದ ಕ್ರಾಸ್ ವೋಟಿಂಗ್ ಮಾಡಿ ಕರೆದುಕೊಂಡು ಹೋಯಿತು. 2018ರಲ್ಲಿ ಎಲ್ಲಿಗೆ ಬಂದು ನಿಂತಿತು?, ಇನ್ನು ಬಿಜೆಪಿಯವರು 17 ಶಾಸಕರನ್ನು ಕರೆದುಕೊಂಡು ಹೋಗಿ 3 ವರ್ಷ ಸರ್ಕಾರವನ್ನೂ ಮಾಡಿ ಈಗೆಲ್ಲಿ ಬಂದು ನಿಂತಿದ್ದಾರೆ. ಮುಂದೆ ಇವರ ಹಣೆಬರಹವೂ ಇಷ್ಟೇ. ಈ ಘರ್ ವಾಪ್ಸಿಗಳೆಲ್ಲ ಕೆಲಸ ಮಾಡಲ್ಲ ಎಂದು ಹೇಳಿದರು.
ಪಕ್ಷ ನಿಷ್ಠೆ ಕಡಿಮೆ ಆಗಿದೆ: ಮಾಜಿ ಶಾಸಕ ಆಯನೂರು ಮಂಜುನಾಥ್ ಮತ್ತು ಡಿ.ಕೆ.ಶಿವಕುಮಾರ್ ಭೇಟಿ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೋಗುವವರನ್ನು ಹಿಡಿದುಕೊಳ್ಳಲು ಆಗುತ್ತಾ?, ಈಗೆಲ್ಲಾ ಪಕ್ಷ ನಿಷ್ಠೆಗಿಂತ ವೈಯಕ್ತಿಕ ಲಾಭವೇ ಮುಖ್ಯ. ಕಾಂಗ್ರೆಸ್ನವರು ಎಲ್ಲ ಪಕ್ಷಗಳ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮದೂ ಅವಕಾಶವಾದಿ ರಾಜಕಾರಣವೇ ಎಂದು ಅವರೇ ಹೇಳಿಲ್ಲವೇ?, ಬಿಜೆಪಿಯವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ? ಎಂದು ಅವರೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ: ಬೆಂಗಳೂರಿನಲ್ಲಿ ಕೆಲ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜನರು ಹಣ ಕೊಟ್ಟು ಖಾಸಗಿ ಟ್ಯಾಂಕರ್ಗಳಲ್ಲಿ ನೀರು ಖರೀದಿ ಮಾಡುತ್ತಿದ್ದಾರೆ. ನಾಗರಿಕರಿಗೆ ಕುಡಿಯುವ ನೀರು, ರೈತರಿಗೆ ರಕ್ಷಣೆ ನೀಡಬೇಕಾದ್ದುಕ ಸರ್ಕಾರದ ಕೆಲಸ. ಅದರಲ್ಲೂ ರಾಜಧಾನಿಯಲ್ಲಿ ನೀರಿನ ಬವಣೆ ಶುರುವಾಗಿದೆ. ಆದರೆ ರಾಜ್ಯ ಸರ್ಕಾರ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಪ್ರತಿಪಕ್ಷಗಳು ಹಾಗೂ ಜನರಿಂದ ವಿರೋಧ, ಟೀಕೆಗಳು ವ್ಯಕ್ತವಾದ ಮೇಲೆ ಸರ್ಕಾರಕ್ಕೆ ಜ್ಞಾನೋದಯವಾಗಿದೆ. ನೀರನ್ನು ಬಿಟ್ಟ ಮೇಲೆ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎನ್ನುತ್ತಿದ್ದಾರೆ. ತಮಿಳುನಾಡಿನವರು ಅರ್ಜಿ ಹಾಕಿದ ಕೂಡಲೇ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕಿತ್ತು. ತಮಿಳುನಾಡಿನಲ್ಲಿ ಕುರುವೈ ಬೆಳೆ ವಿಸ್ತೀರ್ಣವನ್ನು ನಾಲ್ಕು ಪಟ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಅದನ್ನು ನಮ್ಮ ಸರ್ಕಾರ ವಿರೋಧ ಮಾಡಲಿಲ್ಲ, ಕೇಂದ್ರ ಸರ್ಕಾರವೂ ಅದನ್ನು ನಿಲ್ಲಿಸಲಿಲ್ಲ. ಕನ್ನಡಿಗರ ಬದುಕಿನ ಜನತೆ ರಾಷ್ಟ್ರೀಯ ಪಕ್ಷಗಳೂ ಚೆಲ್ಲಾಟ ಆಡುತ್ತಿವೆ. ಅದಕ್ಕೆ ನಮ್ಮಲ್ಲೂ ಕೈಜೋಡಿಸಿದ್ದಾರೆ ಎಂದರು.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಪಕ್ಷಗಳ ಸಭೆ ಕರೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಊರು ಕೊಳ್ಳೆ ಹೊಡೆದ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ಆಗಿದೆ. ಈಗ ಸಭೆ ಕರೆದರೆ ಏನು ಪ್ರಯೋಜನ?, 112 ಅಡಿ ಇದ್ದ ನೀರು ಈಗ 107 ಅಡಿಗೆ ಬಂದು ನಿಂತಿದೆ. ಮಳೆ ಆಗದಿದ್ದರೆ ಏನು ಮಾಡುವುದು?. ಮುನ್ನೆಚ್ಚೆರಿಕೆ ತೆಗೆದುಕೊಳ್ಳದಿದ್ದರೆ ಉಪಯೋಗ ಏನಿದೆ? ಸಭೆಗೆ ನಮ್ಮನ್ನೇನೂ ಕರೆದಿಲ್ಲ. ಮಂಡ್ಯ ಜಿಲ್ಲೆಯ ರೈತರು ನಡೆಸುತ್ತಿರುವ ಪ್ರತಿಭಟನೆ, ಹೋರಾಟಗಳಿಗೆ ನಮ್ಮ ಪಕ್ಷದ ಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಯಾರ ಜೊತೆಯೂ ಮೈತ್ರಿ ಇಲ್ಲ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ: ಕುಮಾರಸ್ವಾಮಿ