ಬೆಂಗಳೂರು: ಕಾಂಗ್ರೆಸ್ ಪಕ್ಷ ಕೊಟ್ಟ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು. ಇಲ್ಲವಾದಲ್ಲಿ ಅವರು ಅಧಿಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಮೂಗು ಹಿಂಡುವ ಕೆಲಸವನ್ನು ನಾವು ಮಾಡೋಣ. ಉಪವಾಸ ಸತ್ಯಾಗ್ರಹ ಮಾಡುವ ಅವಶ್ಯಕತೆ ಇಲ್ಲ. ಅಧಿವೇಶನ ಆರಂಭದ ದಿನದಿಂದ ನಾವು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು. ನಾನು ಗಾಂಧಿ ಪ್ರತಿಮೆ ಎದುರು ಧರಣಿ ಕೂರುತ್ತೇನೆ. ಸದನದ ಒಳಗೆ ಶಾಸಕರು ಹೋರಾಟ ಮಾಡಿ ಕಾಂಗ್ರೆಸ್ನವರಿಗೆ ಪಾಠ ಕಲಿಸಬೇಕು. ಅಧಿಕಾರ ಮದದಿಂದ ಏನೇನೋ ಗ್ಯಾರಂಟಿ ಕೊಟ್ಟಿರುವ ಸಿದ್ದರಾಮಯ್ಯ ಈಗ ನರೇಂದ್ರ ಮೋದಿ ಮೇಲೆ ಬೊಟ್ಟು ಮಾಡಿ ತೋರಿಸ್ತಿದಾರೆ. ಅಕ್ಕಿ ಸೇರಿದಂತೆ ಐದು ಭರವಸೆಗಳನ್ನು ಈಡೇರಿಸಲೇಬೇಕು. ಹೋರಾಟದ ಮೂಲಕ ಈ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ. ನಮ್ಮ ಶಾಸಕರು, ಒಂದು ದಿನ ಅಧಿವೇಶನ ನಡೆಸಲು ಬಿಡದೇ ಹೋರಾಟ ಮಾಡಬೇಕು. ರಾಜಕೀಯ ದೊಂಬರಾಟ ಮಾಡಲು ಬಿಡೋದಿಲ್ಲ ಎಂದು ಕಿಡಿಕಾರಿದರು.
ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ನಾವೆಲ್ಲರೂ ಕೊಡುಗೆ ಕೊಡಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗೋದು ನಿಶ್ಚಿತ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗೋದು. ಕಾಂಗ್ರೆಸ್ ಗ್ಯಾರಂಟಿಗಳ ಪರಿಣಾಮ ನಮಗೆ ಹಿನ್ನಡೆ ಆಯ್ತು. ನಾನು ಯಾವುದೇ ವಿಷಯಗಳನ್ನು ಪ್ರಸ್ತಾಪ ಮಾಡೋಕೆ ಹೋಗುವುದಿಲ್ಲ. ಆದರೆ ಕಾಂಗ್ರೆಸ್ನವರು ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡಬೇಕು. ಇಲ್ಲ ಅಧಿಕಾರ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದರು.
ನರೇಂದ್ರ ಮೋದಿ ಇಳಿಸುವ ವಿಪಕ್ಷಗಳ ಪ್ರಯತ್ನ ಅಕ್ಷಮ್ಯ ಅಪರಾಧ. ಹೀಗಾಗಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲೇಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ಸಾಧನೆ ಮಾತಾಡಬೇಕು, ಮಾತಾಡೋದೆ ಸಾಧನೆ ಆಗಬಾರದು ಎಂದರು.
ಪಂಚೆ ಕಳಚಿಕೊಂಡು ಓಡಬೇಕಾಗುತ್ತದೆ: ಸಿದ್ದರಾಮಯ್ಯ ನವರೇ ನೀವು ಪಂಚೆ ಕಳಚಿಕೊಂಡು ಓಡಬೇಕಾಗುತ್ತದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಪಂಚೆ ಮೇಲೆ ಏರಿಸಿಕೊಂಡು ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಶಿವಕುಮಾರ್ ಮತ್ತೆ ಸಿದ್ದರಾಮಯ್ಯ ನೀತಿಗೆಟ್ಟ ರಾಜಕಾರಣ ಮಾಡ್ತಿದ್ದಾರೆ. ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು ಎಲ್ಲರೂ ಬೀದಿಗೆ ಬಂದಿದ್ದು, ಅವರೆಲ್ಲ ಕೋಲು ಎತ್ತಿಕೊಳ್ತಾರೆ. ಮಹಿಳೆಯರು ಪೊರಕೆ ಎತ್ತಿಕೊಂಡು ನಿಮ್ಮನ್ನು ಓಡಿಸಿಕೊಂಡು ಬರ್ತಾರೆ. ಇನ್ನೂ ಮೂರು ತಿಂಗಳಲ್ಲಿ ಇವರ ಪರಿಸ್ಥಿತಿ ನೋಡಿ ಏನಾಗುತ್ತದೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: BSY: ಗ್ಯಾರಂಟಿಗಳನ್ನು ಕೊಡೋವರೆಗೂ ನಾವು ಸತ್ಯಾಗ್ರಹ ಮಾಡ್ತೇವೆ: ಸರ್ಕಾರಕ್ಕೆ ಬಿ ಎಸ್ ಯಡಿಯೂರಪ್ಪ ಎಚ್ಚರಿಕೆ