ಬೆಂಗಳೂರು: ಮೂಡಲಪಾಳ್ಯ ಯಕ್ಷಗಾನ ಕಲಾವಿದರಲ್ಲಿ ಒಬ್ಬರಿಗೂ ಅಕಾಡೆಮಿಯಲ್ಲಿ ಸದಸ್ಯತ್ವ ನೀಡಿಲ್ಲ. ಕರಾವಳಿ ಯಕ್ಷಗಾನಕ್ಕೊಂದು ನ್ಯಾಯ, ನಮಗೊಂದು ನ್ಯಾಯ ಯಾಕೆ ಎಂಬ ಕೂಗು ಕೇಳಿಬಂದಿದೆ. ಯಕ್ಷಗಾನ ಅಕಾಡೆಮಿಯಲ್ಲಿ ಒಂದೂ ಸದಸ್ಯ ಸ್ಥಾನವೂ ಸಿಗದ ಹಿನ್ನೆಲೆ ಪ್ರತ್ಯೇಕ ಅಕಾಡೆಮಿಗಾಗಿ ಕಲಾವಿದರು ಒತ್ತಾಯ ಮಾಡುತ್ತಿದ್ದಾರೆ.
ಮೊದಲೇ ನಶಿಸುತ್ತಿರುವ ಕಲೆಯಾಗಿದ್ದು, ಯಕ್ಷಗಾನ ಅಕಾಡೆಮಿಯ ಪ್ರೋತ್ಸಾಹವೂ ಸಿಗದಿದ್ದರೆ ಹೇಗೆ. ಹೀಗಾಗಿ ಮೂಡಲಪಾಳ್ಯ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ರಚಿಸಬೇಕು ಎಂಬ ಕೂಗು ಜೋರಾಗಿದೆ
ಈ ಬಗ್ಗೆ ಮಾತನಾಡಿದ, ಮೂಡಲಪಾಳ್ಯ ಯಕ್ಷಗಾನ ಕಲಾವಿದರಾದ ಉಮೇಶ್, ಕರಾವಳಿ ಯಕ್ಷಗಾನ ಹಾಗೂ ಮೂಡಲಪಾಳ್ಯ ಯಕ್ಷಗಾನ ಎರಡಕ್ಕೂ ಸೇರಿದಂತೆ ಅಕಾಡೆಮಿ ನಿರ್ಮಿಸಲಾಗಿದೆ. ಆದರೆ, ಕರಾವಳಿ ಯಕ್ಷಗಾನದವರಿಗೆ ಮಾತ್ರ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನ ನೀಡಲಾಗಿದೆ. ಮೂಡಲಪಾಳ್ಯ ಯಕ್ಷಗಾನದವರಿಗೆ ಅಕಾಡೆಮಿಯಲ್ಲಿ ಸದಸ್ಯತ್ವ ನೀಡದೆ ಇದ್ದರೆ, ಯಕ್ಷಗಾನದ ಉಳಿವು ಹೇಗೆ. ಇದರ ಬೆಳವಣಿಗೆಗಾಗಿ ಸರ್ಕಾರ ಹೊಸದಾಗಿ ಹಾಗೂ ಪ್ರತ್ಯೇಕವಾಗಿ ಅಕಾಡೆಮಿ ಮಾಡಲಿ, ಮೂಡಲಪಾಳ್ಯ ಹಿನ್ನೆಲೆಯ ಕಲಾವಿದರನ್ನೇ ಸದಸ್ಯರು, ಅಧ್ಯಕ್ಷರನ್ನಾಗಿ ಮಾಡಲಿ ಎಂಬ ಒತ್ತಾಯ ಮಾಡ್ತಿದ್ದೇವೆ ಎಂದರು.
ಇನ್ನೊಬ್ಬರು ಕಲಾವಿದರಾದ ಬಸವರಾಜು ಮಾತನಾಡಿ, ಹದಿನೈದು ವರ್ಷದಿಂದ ಮೂಡಲಪಾಳ್ಯ ಯಕ್ಷಗಾನ ಮಾಡಿಕೊಂಡು ಬಂದಿದ್ದೇವೆ. ನಾಟಕ, ಬಯಲಾಟಗಳನ್ನು ಮಾಡಿ, ನಿರ್ದೇಶಕನಾಗಿಯೂ ದುಡಿದಿದ್ದೇನೆ. ಆದರೆ ಸರ್ಕಾರದಿಂದ ಯಾವುದೇ ಮನ್ನಣೆ ಇಲ್ಲ. ಇದಕ್ಕೆ ಸರ್ಕಾರದ ಪ್ರೋತ್ಸಾಹ ಅತ್ಯಗತ್ಯ ಎಂದರು.