ಬೆಂಗಳೂರು: ಕಾಡು ಮಲ್ಲೇಶ್ವರ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಿದರು.
ಬೆಂಗಳೂರಿನ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಾಲಯ ಹಿಂಭಾಗದ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿಕೆಶಿ, ಬಿಬಿಎಂಪಿ ಪೌರ ಕಾರ್ಮಿಕರು, ತಳ್ಳುಗಾಡಿ ವ್ಯಾಪಾರಿಗಳು, ಹೂ ಮತ್ತು ಹಣ್ಣು ಮಾರಾಟಗಾರರು, ಹರಿಶ್ಚಂದ್ರ ಘಾಟ್ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಸ್ಲಂ ನಿವಾಸಿಗಳು ಸೇರಿದಂತೆ ನೂರಾರು ಮಂದಿ ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಸಲೀಂ ಅಹಮದ್, ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಪ್ರಮುಖರಾದ ಶಿವರಾಂ, ರಕ್ಷಿತ್ ಶಿವರಾಂ, ಲಾವಣ್ಯ ಬಲ್ಲಾಳ್ ಹಾಗೂ ರಾಹುಲ್ ಮನೋಜ್ ಕುಮಾರ್ ಮತ್ತಿತರರು ಈ ಕಾರ್ಯಕ್ರಮವನ್ನು ಆಯೋಜಿಸಿ ಬಡವರಿಗೆ ಆಹಾರದ ಕಿಟ್ ವಿತರಿಸುವ ವ್ಯವಸ್ಥೆ ಮಾಡಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಂತಹ ಒಂದು ಸ್ಥಳವನ್ನು ಕಾಪಾಡಿಕೊಂಡು ಬಂದಿರುವುದೇ ಭಾಗ್ಯ. ಹತ್ತು ಹದಿನೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸವಾಗಿರುವ ಜನ ಪವಿತ್ರವಾದ ಸ್ಥಳಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಿ ತೆರಳುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆ ಈ ಸ್ಥಳ ಧರ್ಮ ಉಳಿಸುವ ಜೊತೆಗೆ ಸಾಮಾಜಿಕ ಕಳಕಳಿ ಮೆರೆಯುವ ಕಾರ್ಯವೂ ಆಗುತ್ತಿದೆ. ಕಳೆದ ವರ್ಷ ಐದು ಸಾವಿರ ಮಂದಿಗೆ ಆಹಾರದ ಕಿಟ್ ವಿತರಿಸಲಾಗಿತ್ತು. ಈ ಸಾರಿಯೂ ಅಷ್ಟೇ ಸಂಖ್ಯೆಯ ಜನರಿಗೆ ಸೌಲಭ್ಯ ಲಭಿಸಲಿದೆ ಎಂದ್ರು.
ಇಲ್ಲಿ ರಾಜಕೀಯ ಮುಖ್ಯವಲ್ಲ. ಪಕ್ಷಬೇಧ, ಜಾತಿ, ಧರ್ಮ ಮೀರಿದ ಕಾರ್ಯಕ್ರಮವಾಗಿದೆ. ಇದು ಸರ್ಕಾರದ ಕಾರ್ಯಕ್ರಮ ಅಲ್ಲ, ಸ್ವಂತ ಹಣವನ್ನು ಬಳಸಿ ಸಾರ್ಥಕತೆ ಮರೆಯಲಾಗುತ್ತಿದೆ. ಜನರಿಗೂ ಉಪಕಾರ ಸ್ಮರಣೆ ಇರಲಿ. ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸಾಮಾಜಿಕ ಕಾರ್ಯ ನಡೆಯುತ್ತಿದೆ ಎಂದರು. ನಿಮ್ಮ ಯಾವುದೇ ಸೇವೆಗೆ ಹಾಗೂ ಕಷ್ಟಕ್ಕೆ ನಾನು ಇದ್ದೇನೆ ಎನ್ನುವುದನ್ನು ಮರೆಯಬೇಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕ್ಷೇತ್ರದ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆಗೆ ಆನ್ಲೈನ್ ನೋಂದಣಿ ಮಾಡಿಸುವ ಕಾರ್ಯ ಮಾಡಬೇಕು. ಬಡವರಿಗೆ ಎಲ್ಲರಿಗೂ ಲಸಿಕೆ ಸಿಗಬೇಕು. ನೋಂದಣಿ ಮೂಲಕ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಜನ ಇದ್ದೇವೆ ಎನ್ನುವುದನ್ನು ತೋರಿಸಿಕೊಡಬೇಕು. ಲಸಿಕೆಯನ್ನು ಸರ್ಕಾರ ಉಚಿತವಾಗಿ ಕೊಡಬೇಕು. ಸರ್ಕಾರದಿಂದ ಲಸಿಕೆ ತೆಗೆದುಕೊಂಡು ಹೋಗಿ ಕೆಲವರು ಖಾಸಗಿಯಾಗಿ ಹಣಕ್ಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ಟಿವಿ ಮೂಲಕ ತಿಳಿದು ಕೊಂಡಿದ್ದೇವೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಪೌರಕಾರ್ಮಿಕರು ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರ ಮುಂಚೂಣಿ ಕಾರ್ಯಕರ್ತರಿಗೆ ಇಂದು ಆಹಾರದ ಕಿಟ್ ವಿತರಿಸಲಾಗುತ್ತಿದೆ. ಸೋಂಕು ಹೆಚ್ಚಿದ್ದರೂ ಸಹ ನೀವೆಲ್ಲ ಧೈರ್ಯವಾಗಿ ಮನೆಯಿಂದ ಆಚೆ ಬಂದು ಕಾರ್ಯನಿರ್ವಹಿಸುತ್ತಿರುವುದರಿಂದ ಬೆಂಗಳೂರು ಮಹಾನಗರ ಸ್ವಚ್ಛವಾಗಿ ಉಳಿದಿದೆ. ಜಲ ಮಂಡಳಿ, ವಿದ್ಯುತ್ ಇಲಾಖೆ ಸಿಬ್ಬಂದಿ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರು ಹಾಗೂ ದಾದಿಯರು ಸಹ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದು, ಇವರನ್ನು ನೆನೆಯಬೇಕಾಗಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನರ ಚಿಂತನೆ ಮಾಡಿ ಇಂಥದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂಥದೊಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಯುವಕರಿಗೆ ಅನುಕರಣೀಯ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಇಂದು ಸಂಘ - ಸಂಸ್ಥೆಗಳು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.