ಬೆಂಗಳೂರು: ಈ ವರ್ಷ ಸುರಿದ ಮಹಾಮಳೆಗೆ ಕರ್ನಾಟಕ ನಲುಗಿ ಹೋಗಿದ್ದು, ಜನ ಜೀವನವೇ ಅಸ್ತವ್ಯಸ್ಥವಾಗಿದೆ. ಮಹಾರಾಷ್ಟ್ರದಿಂದ ಅವೈಜ್ಞಾನಿಕವಾಗಿ ಹರಿಬಿಟ್ಟ ನೀರಿನಿಂದಾಗಿ ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹವೇ ಉಂಟಾಗಿದೆ. ಇದರ ಪರಿಣಾಮ ನದಿ ಹಾಗೂ ಹಳ್ಳಗಳು ತುಂಬಿ ಹರಿಯುತ್ತಿದ್ದು, ಸರಿಯಾಗಿ ನೀರು ಹರಿಯಲು ಅವಕಾಶವಿಲ್ಲದ ಕಾರಣ ನದಿ ಪಾತ್ರಗಳು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇದರಿಂದಾಗಿ ನದಿ ತೀರದ ಜನರಿಗೆ ಅಪಾಯ ಎದುರಾದಂತಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಕೃಷ್ಣೆ, ಭೀಮೆ ಹಾಗೂ ಡೋಣಿ ನದಿಗಳು ಹರಿಯುತ್ತಿವೆ. ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು ಎನ್ನುವ ಉದ್ದೇಶದಿಂದ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರು, ಕೆರೆ, ಕಟ್ಟೆ, ಬಾಂದಾರಗಳು, ಐತಿಹಾಸಿಕ ಬಾವಡಿಗಳನ್ನು ಪುನಶ್ಚೇತನಗೊಳಿಸಿ ಅವುಗಳನ್ನು ತುಂಬುವ ಕೆಲಸ ಮಾಡಿದ್ದರು. ಈ ವರ್ಷ ಅತಿಯಾದ ಮಳೆಯಿಂದಾಗಿ ಜಿಲ್ಲೆಯ 156 ಕೆರೆಗಳಲ್ಲಿ 110 ಕೆರೆಗಳು ಶೇ. 70 ರಷ್ಟು ಹಾಗೂ 46 ಕೆರೆಗಳು ಶೇ. 30ರಷ್ಟು ಭರ್ತಿಯಾಗಿವೆ. ಇದರಿಂದ ರೈತರಿಗೆ ನೀರಾವರಿ ಸೌಲಭ್ಯ ದೊರೆತಿದ್ದು, ಇದರ ಜೊತೆಗೆ ಅಂತರ್ಜಲ ಮಟ್ಟ ಸಹ ಹೆಚ್ಚಾಗಿದೆ. ಬಾಂದಾರಗಳಿಗೆ ಗೇಟ್ ಅಳವಡಿಸುವ ಮೂಲಕ ನೀರು ಸಂಗ್ರಹ ಕೆಲಸ ಮಾಡಲಾಗುತ್ತಿದೆ.
ಆದರೆ ಅತಿಯಾದ ಮಳೆಯಿಂದ ನೀರು ಸಂಗ್ರಹಕ್ಕೆ ತಯಾರಿಸಿರುವ ಬಾಂದಾರ ಹಾಗೂ ಕೆರೆಗಳು ಅಪಾಯ ತರುತ್ತದೆ ಎಂಬುವುದಕ್ಕೆ ಡೋಣಿ ನದಿ ಉದಾಹರಣೆಯಾಗಿದೆ. ಸ್ವಲ್ಪ ಮಳೆಯಾದರೆ ಸಾಕು ಡೋಣಿ ನದಿ ತುಂಬಿ ಹರಿಯುತ್ತದೆ. ನದಿ ನೀರು ಸರಾಗವಾಗಿ ಹೋಗಲು ಅವಕಾಶವಿಲ್ಲದಂತೆ ಸುತ್ತಲಿನ ಜನರು, ನದಿಪಾತ್ರವನ್ನು ಅತಿಕ್ರಮಣ ಮಾಡಿಕೊಂಡು ಹೊಲ, ಗದ್ದೆ, ತೋಟ ಮಾಡಿಕೊಳ್ಳಲು ಒಡ್ಡು ಹಾಕಿದ್ದಾರೆ. ಇದರ ಪರಿಣಾಮ ಅತಿಯಾಗಿ ಮಳೆಯಾದರೆ ಡೋಣಿ ನದಿ ತನ್ನ ವ್ಯಾಪ್ತಿಯನ್ನು ಬದಲಿಸಿ ಅಡ್ಡಾದಿಡ್ಡಿ ಹರಿಯುತ್ತದೆ. ಇದರಿಂದ ಅನ್ನದಾತ ಬೆಳೆದ ಬೆಳೆಯು ನಾಶವಾಗುತ್ತಿದೆ. ಭೂಮಿ ಸಹ ಹೆಚ್ಚು ನೀರು ಹೀರಿ ಹಾಳುತ್ತಿದ್ದು, ನದಿಯ ಹೂಳೆತ್ತದಿರುವುದು ಇದಕ್ಕೆ ಕಾರಣ ಎನ್ನುವುದು ಡೋಣಿ ರೈತರ ಆರೋಪವಾಗಿದೆ.
ಉತ್ತರ ಕರ್ನಾಟಕದ ಅನ್ನದಾತ ಅನಾದಿ ಕಾಲದಿಂದಲೂ ಬರವನ್ನು ನೋಡಿಕೊಂಡು ಬೆಳೆದಿದ್ದಾನೆ. ಆದರೆ, 10 ರಿಂದ 15 ವರ್ಷಕ್ಕೊಮ್ಮೆ ಬರುವ ಮಹಾ ಪ್ರವಾಹದಿಂದಾಗುವ ನಷ್ಟ ತಡೆಯಲು, ಅಧಿಕಾರಿಗಳು ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿಲ್ಲ. ಕೇವಲ ಪ್ರವಾಹ ಬಂದಾಗ ನಷ್ಟದ ಅಂದಾಜು ತಯಾರಿಸಿ, ರೈತರಿಗೆ ಸ್ವಲ್ಪ ಪರಿಹಾರ ನೀಡಿ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದರ ಬದಲು ದೀರ್ಘ ಕಾಲದ ನೀರಾವರಿ ಯೋಜನೆಯತ್ತ ಗಮನ ಹರಿಸಿದರೆ, ಈ ಭಾಗದ ಜನರ ಬದುಕು ಹಸನಾಗಲಿದೆ.