ಬೆಂಗಳೂರು: ಇನ್ನು ಮುಂದೆ ಇ- ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಮೂಲಕ ತಾಜಾ ಮಾವುಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪಲಿವೆ.
ಫ್ಲಿಪ್ಕಾರ್ಟ್ ಸಹಯೋಗದಲ್ಲಿ ಆನ್ಲೈನ್ ಮೂಲಕ ಮಾವು ಮಾರಾಟಕ್ಕೆ ವಿಕಾಸಸೌಧದಲ್ಲಿ ತೋಟಗಾರಿಕೆ ಸಚಿವ ನಾರಯಣ ಗೌಡ ಇಂದು ಚಾಲನೆ ನೀಡಿದರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ ಸಂಕಷ್ಟದಲ್ಲಿರುವ ಮಾವು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.
ಬೆಳೆಗಾರರೇ ಮಾವಿಗೆ ಬೆಲೆ ನಿಗದಿ ಮಾಡುವ ಅವಕಾಶ ಇದೇ ಮೊದಲ ಬಾರಿಗೆ ಒದಗಿಸಲಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ದರ ನಿಗದಿ ಮಾಡಲಾಗುತ್ತಿತ್ತು. ಈಗ ಆನ್ಲೈನ್ನಲ್ಲಿ ಮಾವು ಮಾರಾಟ ಆರಂಭಿಸಲಾಗಿದ್ದು, ದರವನ್ನ ಮಾವು ಬೆಳೆಗಾರರು ನಿರ್ಧರಿಸುತ್ತಾರೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ ಎಂದು ಡಾ.ನಾರಾಯಣಗೌಡ ಹೇಳಿದರು.
ಆನ್ಲೈನ್ ಮೂಲಕ ಮಾವು ಮಾರಾಟ ಆರಂಭಿಸಿದ್ದು ಪ್ರಾಯೋಗಿಕ. ಇದರಲ್ಲಿನ ನ್ಯೂನ್ಯತೆ ಸರಿಪಡಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರ ಉತ್ಪನ್ನಗಳನ್ನು ಸೇರ್ಪಡೆ ಮಾಡುತ್ತೇವೆ. ಫ್ಲಿಪ್ಕಾರ್ಟ್ನಲ್ಲಿ ಗ್ರಾಹಕರು ಮಾವು ಖರೀದಿ ಮಾಡಬಹುದು. ಆದರೆ, ದರ ನಿಗದಿ ಮಾಡುವ ಹಕ್ಕು ಬೆಳೆಗಾರರಿಗೆ ಇದೆ ಎಂದರು.
ರೈತ ಉತ್ಪಾದಕರ ಸಂಸ್ಥೆಯಲ್ಲಿ (ಎಫ್ಪಿಒ) ಮಾವು ಬೆಳೆಗಾರರು ಹೆಸರು ನೋದಾಯಿಸಿಕೊಳ್ಳಬೇಕು. ನೋಂದಾಯಿತ ರೈತರ ಹೆಸರನ್ನು ಫ್ಲಿಪ್ಕಾರ್ಟ್ ನವರು ಪಡೆದುಕೊಳ್ಳುತ್ತಾರೆ. ಗ್ರಾಹಕರು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ತಳಿಯ ಮಾವನ್ನು ರೈತರಿಂದ ಪಡೆದು ಗ್ರಾಹಕರಿಗೆ ಫ್ಲಿಪ್ಕಾರ್ಟ್ ನೀಡಲಿದೆ.
ಈಗ ಫ್ಲಿಪ್ಕಾರ್ಟ್ ಮಾತ್ರ ಈ ಸೇವೆ ನೀಡಲು ಮುಂದಾಗಿದೆ. ಕೆಲ ದಿನಗಳ ಬಳಿಕ ಇತರ ಆನ್ಲೈನ್ ಮಾರಾಟ ಸಂಸ್ಥೆ ಮೂಲಕವೂ ಈ ಕಾರ್ಯ ಆರಂಭವಾಗಲಿದೆ. ರೈತರಿಗೆ ಅನುಕೂಲ ಆಗುವಂತ ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಕೃಷಿ ಉತ್ಪನ್ನ ಹಾಳಾಗದಂತೆ ನೋಡಿಕೊಳ್ಳಲು ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದರು.