ಬೆಂಗಳೂರು: ಭಾರಿ ಮಳೆ, ಸಿಡಿಲಿನಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನ ಸೇವೆಗಳಿಗೆ ಅಡ್ಡಿಯಾಗಿದೆ. ನಗರಕ್ಕೆ ಬರುತ್ತಿದ್ದ 6 ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಎರಡು ಅಂತಾರಾಷ್ಟ್ರೀಯ ವಿಮಾನಗಳಾದ ಪ್ಯಾರಿಸ್ನಿಂದ ಆಗಮಿಸುವ ಏರ್ ಫ್ರಾನ್ಸ್ ಮತ್ತು ಫ್ರಾಂಕ್ಫರ್ಟ್ನಿಂದ ಲುಫ್ಥಾನ್ಸ ವಿಮಾನವನ್ನು ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ದೆಹಲಿ, ಮುಂಬೈ ಮತ್ತು ಪುಣೆಯಿಂದ ಇಂಡಿಗೋ ಮತ್ತು ಗೋ ಫಸ್ಟ್‌ನ ನಾಲ್ಕು ದೇಶೀಯ ವಿಮಾನಗಳ ಹಾದಿಯನ್ನೂ ಬದಲಿಸಲಾಗಿದೆ. ಆರು ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು ಒಂಬತ್ತು ವಿಮಾನಗಳು ವಿಳಂಬವಾಗಿವೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣದಲ್ಲಿ ರಾತ್ರಿ 11.30 ರಿಂದ ಬೆಳಗ್ಗಿನ ಜಾವ 4 ಗಂಟೆಯವರೆಗೆ 109 ಮಿಮೀ ಮಳೆಯಾಗಿದ್ದು, ಕಳಪೆ ಹವಾಮಾನ ಪರಿಸ್ಥಿತಿಯಿಂದಾಗಿ ವಿಮಾನಗಳ ನಿರ್ಗಮನ ವಿಳಂಬವಾಗಿದೆ. ಬ್ಯಾಂಕಾಕ್, ದುಬೈ, ಕೌಲಾಲಂಪುರ್, ಆಮ್ಸ್ಟರ್‌ಡ್ಯಾಮ್, ಟೋಕಿಯೊ ಮತ್ತು ಕತಾರ್‌ಗೆ ವಿಮಾನಗಳು ಸರಾಸರಿ 25 ನಿಮಿಷಗಳ ಕಾಲ ವಿಳಂಬವಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಪುಣೆ ಮತ್ತು ಅಹಮದಾಬಾದ್‌ಗೆ ಮೂರು ದೇಶೀಯ ವಿಮಾನಗಳು ವಿಳಂಬವಾಗಿವೆ.
ಹವಾಮಾನ ವೈಪರೀತ್ಯದಿಂದಾಗಿ ಮಧ್ಯರಾತ್ರಿ ಮತ್ತು ಮುಂಜಾನೆ ಬೆಂಗಳೂರಿನಿಂದ ಹೊರಡಬೇಕಿದ್ದ ಒಂಬತ್ತು ವಿಮಾನಗಳ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಟರ್ಮಿನಲ್‌ನ ಹೊರಭಾಗದಲ್ಲಿರುವ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮಳೆ ನೀರು ನಿಂತಿರುವ ಕುರಿತು, ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳಲ್ಲಿ ಅದರಲ್ಲೂ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಬಳ್ಳಾರಿ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿರುವ ಬಗ್ಗೆ ಪ್ರಯಾಣಿಕರು ದೂರಿದ್ದಾರೆ. ಟರ್ಮಿನಲ್ ಪ್ರದೇಶದ ಸಮೀಪವಿರುವ ಪಾರ್ಕಿಂಗ್ ಬೇ ನೀರಲ್ಲಿ ಮುಳುಗಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕಂಡು ಕೇಳರಿಯದ ಮಳೆ: ಫೋಟೋಗಳಲ್ಲಿ ಸಿಲಿಕಾನ್ ಸಿಟಿಯ ಚಿತ್ರಣ