ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳಒಪ್ಪಂದ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಇರುವ ಬಗ್ಗೆ ಸಂಶಯ ಇಟ್ಟುಕೊಳ್ಳಬೇಡಿ. ಯಾರು ಮೈತ್ರಿ ಸರ್ಕಾರ ಕೆಡವಲು ಹಣ ಹೂಡಿಕೆ ಮಾಡಿದವರಿಗೆ, ಎರಡು ಪಕ್ಷದವರು ರಕ್ಷಣೆ ಕೊಡುತ್ತಿದ್ದಾರೆ. ಇದಕ್ಕಿಂತಲೂ ಉದಾಹರಣೆ ಬೇಕಾ?. ಮದ್ದೂರಿನಲ್ಲಿ ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಾರಲ್ಲ? ಎಂದು ಕಿಡಿಕಾರಿದರು.
ಶ್ರೀಲಂಕಾಗೆ ರಾತ್ರೋರಾತ್ರಿ ಓಡಿ ಹೋಗಿದ್ದ. ಜಾಮೀನು ಸಿಕ್ಕಮೇಲೆ ಏಕೆ ಬಂದ?. ಆ ಸರ್ಕಾರ ತೆಗೆಯಲು ಎಷ್ಟು ಹೂಡಿಕೆ ಮಾಡಿದ್ದ?. ಅಂತವನನ್ನು ಏಕೆ ಕಾಂಗ್ರೆಸ್ ಗೆ ಸೇರಿಸಿಕೊಂಡ್ರಿ?, ನಾರಾಯಣಗೌಡರನ್ನು ಏಕೆ ಸೇರಿಸಿಕೊಳ್ಳಲು ಯತ್ನಿಸಿದ್ರಿ, ಮಂಡ್ಯ ಜಿಲ್ಲೆಯ ಮಹಾನುಭಾವರು ಹೇಳುತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ ಹೆಚ್ ಡಿಕೆ, ಸಚಿವ ಬೈರತಿ ಬಸವರಾಜ್ ಬರುತ್ತಾರೆ, ಎಸ್.ಟಿ. ಸೋಮಶೇಖರ್ ಬರುತ್ತಾರೆ, ಮಾತುಕತೆ ನಡೆಸುತ್ತಿದ್ದೇವೆ ಎಂದು ನಾಯಕರು ಹೇಳುತ್ತಿದ್ದಾರೆ ಎಂದರು.
ಒಳ ಒಪ್ಪಂದ ವಿಚಾರ ಫುಲ್ ಸ್ಟಾಪ್ ಇಡಿ- ಹೆಚ್ಡಿಕೆ: ಒಳ ಒಪ್ಪಂದ ಆರೋಪಕ್ಕೆ ಫುಲ್‌ಸ್ಟಾಪ್ ಇಡಿ. ಮುಖ್ಯಮಂತ್ರಿಗಳೂ ಹೇಳ್ತಾರೆ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ಅಂತ, ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳ್ತಾರೆ. ಬಿಜೆಪಿ ಜತೆ ಒಳ ಒಪ್ಪಂದ ಅಂತ, ಕಾಂಗ್ರೆಸ್ ಹಾಗೂ ಬಿಜೆಪಿಯವರಿಗೆ ಇದು ಬಿಟ್ಟು ಬೇರೆ ವಿಚಾರ ಇಲ್ಲವೇ?. ವಿಷಯ ಇಲ್ಲವೆಂದರೆ ಹೇಳಲಿ ಬೇಕಾದರೆ ನಾನೇ ಕೊಡುತ್ತೇನೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಬಿಜೆಪಿಗೆ ಆತಂಕ ಶುವಾಗಿದೆ- ಕುಮಾರಸ್ವಾಮಿ: ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರಕ್ಕೆ ಬರುವ ಸ್ಪಷ್ಟ ಭರವಸೆ ಇಲ್ಲ. ಎರಡೂ ಪಕ್ಷಗಳಿಗೆ ಆತಂಕ ಶುರುವಾಗಿದೆ. ಜೆಡಿಎಸ್ನವರು ಎಲ್ಲಿ ಬಿಜೆಪಿ ಜೊತೆ ಹೋಗ್ತಾರೆ ಅಂತ ಕಾಂಗ್ರೆಸ್‌ನವರಿಗೆ, ಕಾಂಗ್ರೆಸ್ ಜೊತೆ ಎಲ್ಲಿ ಹೋಗ್ತಾರೆ ಅಂತ ಬಿಜೆಪಿಯವರಿಗೆ. ಹೀಗಾಗಿ ಪದೇ ಪದೆ ನಮ್ಮನ್ನ ಕೆಣಕುತ್ತಾರೆ. ನಾನು ಈ ಬಾರಿ 123 ಗುರಿಯಿಟ್ಟು ಹೊರಟಿದ್ದೇವೆ. ಇದು ನಿಮಗೆ ಹಾಸ್ಯವಾಗಿ ಲಘುವಾಗಿ ಕಾಣಬಹದು. ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ಮೂಲಕ ತಲುಪಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಹೇಳಿಕೆ 8ನೇ ಅದ್ಭುತ-ಹೆಚ್ಡಿಕೆ: ಜೆಡಿಎಸ್‌ನಲ್ಲಿ ಅಪ್ಪ ಮಕ್ಕಳ ಮಾತನ್ನೂ ಕೇಳದಿದ್ರೆ ಹೊರ ಹಾಕುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆಂಡಾಮಂಡಲರಾದ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯನವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ. ನಾವು ಸ್ಟೇಜ್ ಹಾಕಬೇಕು, ಜನ ಸೇರಿಸಬೇಕು. ಅವರು ಬಂದು ಕಾಲುಮೇಲೆ ಕಾಲು ಹಾಕಿ ದೇವೇಗೌಡರನ್ನ ಬಳಿ ಕೂರುತ್ತಿದ್ರು. ಯಾವತ್ತು ದೇವೇಗೌಡರು ತಮ್ಮ ಮಕ್ಕಳನ್ನು ಮುಂದೆ ನಿಲ್ಲಿಸಿಕೊಂಡಿರಲಿಲ್ಲ. ಆದರೆ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿ ಪಾಳೆಗಾರಿಕೆ ಮಾಡ್ತಾ, ದೇವೇಗೌಡರನ್ನು ಹೆದರಿಸಿಟ್ಟುಕೊಂಡಿದ್ರು. ಹಿಂದೆ ಬ್ಯಾನರ್‌ನಲ್ಲಿ ಭಾವಚಿತ್ರ ಇಲ್ಲ ಅಂತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಹೆಚ್ ಡಿಕೆ ಆರೋಪಿಸಿದರು.
ಸಿದ್ದರಾಮಯ್ಯನವರು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಿ ಎರಡು ಸೀಟು ತರಲಿ ನೋಡೋಣ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಜೆಡಿಎಸ್ ಬೆಳೆಸದಿದ್ದರೆ ನಿಮ್ಮನ್ನ ಕಾಂಗ್ರೆಸ್‌ನವರು ಎಲ್ಲಿ ಕರೆಯುತ್ತಿದ್ರು. ಮೈಸೂರಲ್ಲಿ ಎಂಟು ಜನ ಶಾಸಕರನ್ನ ಕರೆದುಕೊಂಡು ಹೋಗಿ ಮತ್ತೆ ಎಷ್ಟು ಗೆಲ್ಲಿಸಿಕೊಂಡ್ರಿ. ಜನತೆಯ ಮುಂದೆ ಉತ್ತರ ಕೊಡಿ ಎಂದು ಒತ್ತಾಯಿಸಿದರು.
ಸಿಎಂ ಪರಿಹಾರ ನಿಧಿ ಬಳಕೆಗೆ ಅವಕಾಶ ಅಗತ್ಯ: ಬಡವರ ಚಿಕಿತ್ಸೆಗೆ ನೆರವಾಗಲು ಸಿಎಂ ಪರಿಹಾರ ನಿಧಿ ಬಳಕೆಗೆ ಅವಕಾಶ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಹೆಚ್ಡಿಕೆ, ನೀತಿ ಸಂಹಿತೆ ಹೆಸರಲ್ಲಿ ಬಡವರ ಜೀವ ತೆಗೆಯೋದು ಬೇಡ. ಇವತ್ತು ಹತ್ತು ಇಪ್ಪತ್ತು ಲಕ್ಷ ಹಣ ಕಟ್ಟಲು ಸಾಧ್ಯವಾಗದಿರುವ ಜನ ನಿತ್ಯ ಮನೆ ಮುಂದೆ ಬರ್ತಾರೆ. ಅವರಿಗೆ ನೆರವಾಗಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದನ್ನೂಓದಿ:ಖಾಕಿಗೆ ಬೈ ರಾಜಕೀಯಕ್ಕೆ ಜೈ: ರೆಡ್ಡಿ ಪಕ್ಷದಿಂದ ಚುನಾವಣಾ ಅಖಾಡಕ್ಕಿಳಿದ ಪೊಲೀಸ್ ಹೆಡ್ ಕಾನ್ಸ್ಟೇಬಲ್