ಬೆಂಗಳೂರು: ಗುರುವಾರ ಹೊರಬಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ, ಅದರಲ್ಲೂ ಪಂಜಾಬ್‌ನ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಆಂತರಿಕ ಕಚ್ಚಾಟದಿಂದ ಬಳಲಿ ಹೋಗಿರುವ ರಾಜ್ಯ ಕಾಂಗ್ರೆಸ್ಗೆ ಕಾಯಕಲ್ಪ ನೀಡುವ ಕಾರ್ಯವನ್ನು ಪಕ್ಷದ ಹೈಕಮಾಂಡ್ ಇದುವರೆಗೂ ಮಾಡಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಇತ್ತೀಚೆಗೆ ನಡೆದ ಮೇಕೆದಾಟು ಪಾದಯಾತ್ರೆ ಸಂದರ್ಭ ಪ್ರತ್ಯೇಕವಾಗಿ ಹೆಜ್ಜೆ ಹಾಕಿದ್ದು ಹಾಗೂ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಲು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ್ದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಇತ್ತೀಚಿನ ಉದಾಹರಣೆಗಳಾಗಿ ಲಭಿಸಿವೆ.
ಆಂತರಿಕ ಕಚ್ಚಾಟ ಹಾಗೂ ಭಿನ್ನಾಭಿಪ್ರಾಯದಿಂದ ಬಳಲಿ ಹೋಗಿದ್ದ ಪಂಜಾಬ್ನಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದೆ. ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಇದೀಗ ಪ್ರತಿಪಕ್ಷವಾಗಿ ಕೂರುವ ಸ್ಥಿತಿ ತಲುಪಿದೆ. ಹಾಲಿ ಮುಖ್ಯಮಂತ್ರಿ ಆಗಿದ್ದ ಚರಂಜಿತ್ ಸಿಂಗ್ ಚನ್ನಿ ಹಾಗೂ ಮಾಜಿ ಸಿಎಂ ಅಮರಿಂದರ್ ಸಿಂಗ್ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಮುಖ್ಯಮಂತ್ರಿ ಆಗುವ ಕನಸನ್ನು ಹೊತ್ತು ಕಾಂಗ್ರೆಸ್ನಲ್ಲಿ ದೊಡ್ಡಮಟ್ಟದ ವಿವಾದ ಸೃಷ್ಟಿಸಿದ್ದ ಮತ್ತು ಹಿರಿಯ ನಾಯಕ ನವಜೋತ್ ಸಿಂಗ್ ಸಿದ್ದು ಸಹ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಪಕ್ಷದ ಆಂತರಿಕ ಬಿಕ್ಕಟ್ಟು ಹಾಗೂ ಒಳ ಜಗಳಕ್ಕೆ ಸಾರ್ವಜನಿಕರು ತಕ್ಕ ಉತ್ತರವನ್ನು ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಪಕ್ಷ ಸಂಘಟನೆ ಬಲವರ್ಧನೆ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸದೆ ವೈಯಕ್ತಿಕ ನಾಯಕತ್ವ ರೂಪಿಸಿಕೊಳ್ಳಲು ಪ್ರಯತ್ನಿಸಿ ಕಾಂಗ್ರೆಸ್ ಸೋಲಿಗೆ ಕಾರಣ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದೇ ರೀತಿಯ ಪ್ರಸ್ತುತ ರಾಜ್ಯ ಕಾಂಗ್ರೆಸ್ನಲ್ಲಿಯೂ ಇದ್ದು, ಇನ್ನೂ ಒಂದು ವರ್ಷದ ನಂತರ ನಡೆಯುವ ವಿಧಾನಸಭೆ ಚುನಾವಣೆಯೊಳಗೆ ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್ಗೆ ಹಿನ್ನಡೆ ಉಂಟಾಗಲಿದೆ ಎಂಬ ಮಾತು ರಾಜಕೀಯ ಪಂಡಿತರಿಂದ ಕೇಳಿಬರುತ್ತಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ದೇಶದಲ್ಲಿಯೇ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುತ್ತಿದೆ. ಇತ್ತ, ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹಲವು ರೀತಿಯ ಕಸರತ್ತು ನಡೆಸುತ್ತಿದ್ದು, ಇದಕ್ಕೆ ಸೆಡ್ಡು ಹೊಡೆಯುವ ರೀತಿ ಒಗ್ಗಟ್ಟಿನ ಮಂತ್ರದೊಂದಿಗೆ ಕಾಂಗ್ರೆಸ್ ಮೇಲೇಳಬೇಕಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಇಂತಹ ಯಾವುದೇ ವಾತಾವರಣ ಕಂಡು ಬರುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅಧಿಕಾರವಹಿಸಿಕೊಂಡ ದಿನದಿಂದಲೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಅವರ ನಡುವೆ ಅಂತರಿಕ ಭಿನ್ನಾಭಿಪ್ರಾಯ ಉಳಿದುಕೊಂಡು ಬಂದಿದೆ. ಇದೇ ಕಾರಣಕ್ಕೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಯಾವುದೇ ಉತ್ತೇಜನ ಸಿಗುತ್ತಿಲ್ಲ.
ಉಪಚುನಾವಣೆಗಳಲ್ಲಿಯೂ ಒಂದಿಷ್ಟು ಹಿನ್ನಡೆ ಉಂಟಾಗಿದೆ. ಇದೇ ಸ್ಥಿತಿ ಮುಂದುವರಿದರೆ ಬಿಜೆಪಿಗೆ ಪೈಪೋಟಿ ನೀಡಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್ಗೆ ಕಷ್ಟವಾಗಲಿದೆ. ಅಧ್ಯಕ್ಷರಾಗಿ ಎರಡು ವರ್ಷ ಕಳೆದರೂ ಡಿಕೆಶಿಗೆ ಇದುವರೆಗೂ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಪದಾಧಿಕಾರಿಗಳನ್ನು ನೇಮಿಸಲು ಸಹ ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಭಯ ನಾಯಕರ ನಡುವೆ ಬಾಂಧವ್ಯ ಏರ್ಪಡದಿದ್ದರೆ ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಎದುರಿಸುವುದು ಕಷ್ಟ ಸಾಧ್ಯವಾಗಲಿದೆ ಎಂದೂ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಸಾಧ್ಯ: ಯಡಿಯೂರಪ್ಪ