ಬೆಂಗಳೂರು: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪದಡಿ ಓರ್ವ ರೌಡಿ ಶೀಟರ್, ಮತ್ತೋರ್ವ ಅಪ್ರಾಪ್ತನೂ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ನಗರದ ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಹೊಂಬೇಗೌಡ ನಗರದ ಬಾರ್ ಸಮೀಪ ಗಣೇಶ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದ ಅರವಿಂದ್, ರಾಜ, ಶ್ರೀನಿವಾಸ್ ಹಾಗೂ ಗಣೇಶ್ ಬಂಧಿತರು.
ಅಂದು ರಾತ್ರಿ ಮುರುಗನ್ ದೇವಸ್ಥಾನದ ಹಬ್ಬದ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಗಣೇಶ್ ಹಾಗೂ ಆರೋಪಿಗಳ ನಡುವೆ, ಯುವತಿಯೊಬ್ಬಳನ್ನು ರೇಗಿಸಿರುವ ಕಾರಣಕ್ಕೆ ವಾಗ್ವಾದ ನಡೆದಿತ್ತು. ಇದೇ ವಿಚಾರವಾಗಿ ಆರೋಪಿಗಳು ಗಣೇಶನ ಮನೆ ಬಳಿ ಬಂದು ಎಚ್ಚರಿಕೆ ನೀಡಿ ಹೋಗಿದ್ದರು. ನಂತರ ಅದೇ ದಿನ ರಾತ್ರಿ ಮದ್ಯಪಾನಕ್ಕಾಗಿ ಗಣೇಶ್ ಹೊಂಬೇಗೌಡ ನಗರದ ಬಾರ್ ಬಳಿ ತೆರಳಿದ್ದಾನೆ. ಈ ವೇಳೆ ಅಲ್ಲಿಗೆ ಬಂದಿದ್ದ 8 ರಿಂದ 10 ಜನರ ತಂಡ, ಗಣೇಶನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಗಣೇಶ್ ಚಿಕಿತ್ಸೆ ಪಡೆದುಕೊಂಡು ಸಿದ್ದಾಪುರ ಠಾಣೆಗೆ ದೂರು ನೀಡಿದ್ದ.
ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ಮಾತನಾಡಿ, "ಪ್ರಕರಣ ದಾಖಲಿಸಿಕೊಂಡಿರುವ ಸಿದ್ದಾಪುರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಓರ್ವ ಆರೋಪಿ ರೌಡಿ, ಮತ್ತೋರ್ವ ಅಪ್ರಾಪ್ತನಿದ್ದಾನೆ. ಏರಿಯಾದಲ್ಲಿ ಪ್ರಾಬಲ್ಯ ಸಾಧಿಸುವ ವಿಚಾರವಾಗಿ ಆರೋಪಿಗಳು ಮತ್ತು ದೂರುದಾರನ ನಡುವೆ ಈ ಹಿಂದೆಯೂ ಗಲಾಟೆಗಳಾಗಿದ್ದವು. ಅದೇ ವೈಷಮ್ಯದಿಂದ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಉಳಿದ ಆರೋಪಿಗಳಿಗೆ ಶೋಧ ಮುಂದುವರೆದಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಅಪ್ರಾಪ್ತನೊಂದಿಗೆ ಹೆಂಡತಿಯ ಸಲುಗೆ: ಕೊಲೆಯಲ್ಲಿ ಅಂತ್ಯ ಕಂಡ ವಿವಾಹೇತರ ಸಂಬಂಧ..!
ಯುವ ವಿಜ್ಞಾನಿ ಮೇಲೆ ಹಲ್ಲೆ ಯತ್ನ (ಇತ್ತೀಚಿನ ಘಟನೆ): ನಾಲ್ಕು ಮಂದಿ ಅಪರಿಚಿತರು ಯುವ ವಿಜ್ಞಾನಿಯೊಬ್ಬರ ಕಾರಿನ ಗಾಜು ಒಡೆದು ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರು ನಗರದ ಹೊರವಲಯದ ರಾವುತನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿತ್ತು. ಆಶುತೋಷ್ ಕುಮಾರ್ ಸಿಂಗ್ ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದರು. ಇವರು ಸೆಂಟರ್ ಫಾರ್ ನ್ಯಾನೋ ಸಾಫ್ಟ್ ಮ್ಯಾಟರ್ ಸೈನ್ಸಸ್ನಲ್ಲಿ ವಿಜ್ಞಾನಿಯಾಗಿದ್ದಾರೆ. ಆಗಸ್ಟ್ 24ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾವುತನಹಳ್ಳಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿತ್ತು. ಆಶುತೋಷ್ ಅವರು ಕ್ವಿಡ್ ಕಾರಿನಲ್ಲಿ ಬರುತ್ತಿದ್ದಾಗ ನಾಲ್ವರು ಅಪರಿಚಿತರು ದಾಳಿ ಮಾಡಿದ್ದಾರೆ. ಕಾರು ಹಿಂಬಾಲಿಸಿ ಹಿಂದಿನ ಗ್ಲಾಸ್ ಒಡೆದು ಹಾಕಿದ್ದರು. ಆಶುತೋಷ್ ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಜಮೀನು ವಿವಾದ: ಗುದ್ದಲಿಯಿಂದ ಹೊಡೆದು ಅಣ್ಣ, ಅತ್ತಿಗೆಯನ್ನೇ ಕೊಂದು ಪೊಲೀಸ್ ಠಾಣೆಗೆ ಬಂದ ತಮ್ಮ