ಬೆಂಗಳೂರು: ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತದಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಚೆನ್ನೈನ ಡಾ. ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಚಂದನ್ ಬಲ್ಲಾಳ್, ಆತನ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ಸ್ವಾಗತಕಾರ್ತಿ (ರಿಸೆಪ್ಶನಿಸ್ಟ್) ರಿಜ್ಮಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಬಂಧಿತರು.
ಈ ಜಾಲದ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು ಕಳೆದ ಅಕ್ಟೋಬರ್‌ನಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಕುಮಾರ್ ಮತ್ತು ನಯನ್ ಕುಮಾರ್ ಎಂಬವರನ್ನು ಬಂಧಿಸಿದ್ದರು. ಈ ಆರೋಪಿಗಳು ಗರ್ಭಿಣಿಯರನ್ನು ಗುರುತಿಸಿ ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತ್ತಿದ್ದರು. ಬಳಿಕ ಹೆಣ್ಣು ಭ್ರೂಣವಾದರೆ ಗರ್ಭಪಾತ ಮಾಡಿಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.
ತಿಂಗಳಿಗೆ ಕನಿಷ್ಠ 20-25 ಭ್ರೂಣ ಹತ್ಯೆ: ತನಿಖೆ ಮುಂದುವರೆದಂತೆ, ಪ್ರಕರಣದಲ್ಲಿ ವೈದ್ಯರ ಸಹಿತ ಇನ್ನೂ ಐವರ ಕೈವಾಡವಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೇರಿದೆ. ಆರೋಪಿಗಳು ವ್ಯವಸ್ಥಿತವಾಗಿ ಜಾಲ ರೂಪಿಸಿಕೊಂಡು ದುಷ್ಕೃತ್ಯ ಎಸಗುತ್ತಿದ್ದರು. ಕಳೆದೆರಡು ವರ್ಷಗಳಿಂದ ನಿರಂತರವಾಗಿ ತಿಂಗಳಿಗೆ ಕನಿಷ್ಠ 20-25 ಭ್ರೂಣ ಹತ್ಯೆ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಮೈಸೂರಿನ ಉದಯಗಿರಿಯ ಖಾಸಗಿ ಆಸ್ಪತ್ರೆ, ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಡೇ ಕೇರ್ ಸೆಂಟರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಮಂದಿರದಿಂದ ಬಾಲಕರು ಪರಾರಿ(ಪ್ರತ್ಯೇಕ ಪ್ರಕರಣ): ಬೆಂಗಳೂರಿನ ಎಂ.ಎಚ್.ಮರೀಗೌಡ ರಸ್ತೆಯಲ್ಲಿರುವ ಸರ್ಕಾರಿ ಬಾಲಮಂದಿರದಿಂದ ನಾಲ್ವರು ಬಾಲಕರು ಪರಾರಿಯಾಗಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 17ರ ರಾತ್ರಿ ಊಟದ ಕೋಣೆಯ ಕಿಟಕಿಯ ಸರಳು ಮುರಿದು ಅಸ್ಸಾಂ ಮೂಲದ ಬಾಲಕರು ಪರಾರಿಯಾಗಿದ್ದಾರೆ. ಬಾಲಮಂದಿರದ ಸೂಪರಿಂಟೆಂಡೆಂಟ್ ನೀಡಿದ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೆಜೆಸ್ಟಿಕ್ ಸುತ್ತಲಿನ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ 14 ವರ್ಷ ವಯಸ್ಸಿನ ಇಬ್ಬರು ಹಾಗೂ 16 ವರ್ಷ ವಯಸ್ಸಿನ ಇಬ್ಬರನ್ನು ಒಂದು ತಿಂಗಳ ಹಿಂದೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಮುಂದೆ ಹಾಜರುಪಡಿಸಿದ್ದರು. ಸಮಿತಿಯ ಆದೇಶಾನುಸಾರ ನಾಲ್ವರು ಬಾಲಕರಿಗೆ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ನವೆಂಬರ್ 17ರ ರಾತ್ರಿ ಬಾಲಮಂದಿರದ ಊಟದ ಕೋಣೆಯ ಕಿಟಕಿಯ ಸರಳುಗಳನ್ನು ಮುರಿದ ಬಾಲಕರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚಾಕುವಿನ ಹಿಡಿಕೆಯೊಳಗೆ ಅಡಗಿಸಿಟ್ಟು ಚಿನ್ನ ಸಾಗಣೆ, ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ