ಬೆಂಗಳೂರು: ರಾಜ್ಯ ಹೈಕೋರ್ಟ್ಗೆ ನೂತನವಾಗಿ ನೇಮಕಗೊಂಡಿರುವ ಐವರು ಹೆಚ್ಚುವರಿ ನ್ಯಾಯಮೂರ್ತಿಗಳು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಹೈಕೋರ್ಟ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರು ನೂತನ ನ್ಯಾಯಮೂರ್ತಿಗಳಾದ ಶಿವಶಂಕರ ಅಮರಣ್ಣವರ, ಎಂ.ಗಣೇಶಯ್ಯ ಉಮಾ, ವೇದವ್ಯಾಸಾಚಾರ್ ಶ್ರೀಶಾನಂದ, ಹಂಚಾಟೆ ಸಂಜೀವಕುಮಾರ್ ಮತ್ತು ಪದ್ಮರಾಜ ನೇಮಚಂದ್ರ ದೇಸಾಯಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೇವಲ ನ್ಯಾಯಮೂರ್ತಿಗಳು ಹಾಗು ಅವರ ಕುಟುಂಬ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೈಕೋರ್ಟ್ ಪ್ಯಾಟ್ರನ್ ಇನ್ ಚೀಫ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು.
ಕೋರ್ಟ್ ಹಾಲ್ ಒಂದರಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಜೊತೆ ವೇದಿಕೆ ಹಂಚಿಕೊಂಡ ನೂತನ ನ್ಯಾಯಮೂರ್ತಿಗಳು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ. ಅನಿಲ್ ಕುಮಾರ್ ಹಾಗು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಅವರು ನೂತನ ನ್ಯಾಯಮೂರ್ತಿಗಳಿಗೆ ಸನ್ಮಾನಿಸಿದರು.
ಕಾರ್ಯಕ್ರಮಕ್ಕೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸಹಾಯಕ ಸಾಲಿಸಿಟರ್ ಜನರಲ್ ಸಿ. ಶಶಿಕಾಂತ್ ಅವರನ್ನು ಆಹ್ವಾನಿಸಲಾಗಿತ್ತು.