ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿರುವ ಈ ಪ್ರದೇಶವೇ ಒಂದು ರೀತಿಯ ವೈಶಿಷ್ಟ್ಯ ಮತ್ತು ಅಚ್ಚರಿಗೆ ಕಾರಣವಾಗಿದೆ. ಇಲ್ಲಿ ನೆಲೆಸಿರುವ ಬಹುತೇಕ ಮಂದಿ ರಾಜ್ಯವನ್ನು ಆಳಿರುವ ಕೀರ್ತಿಗೆ ಭಾಜನರಾಗಿದ್ದಾರೆ. ಯಾವುದು ಆ ಪ್ರದೇಶ ಅಂತೀರಾ?
ರವೀಂದ್ರನಾಥ ಠಾಗೋರ್ ನಗರ (ಆರ್.ಟಿ.ನಗರ). ಇದು ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ಬಡಾವಣೆ. ಐವರು ಮುಖ್ಯಮಂತ್ರಿಗಳಾದ ಕೀರ್ತಿ ಈ ಬಡಾವಣೆಗೆ ಸಲ್ಲುತ್ತದೆ.
ನಾವು ಹೇಳುತ್ತಿರುವುದು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸ ಇರುವ ರಸ್ತೆಯ ಬಗ್ಗೆ. ಮುನಿರೆಡ್ಡಿಪಾಳ್ಯದ ಮೂಲಕ ದೂರದರ್ಶನ ಕೇಂದ್ರದಿಂದ ಆರ್.ಟಿ.ನಗರಕ್ಕೆ ಹೋಗುವ ದಾರಿಯ ಎಡಭಾಗದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಜಾಗ, ಆಜುಬಾಜಿನಲ್ಲಿ ಸಾಗುವಾಗ ಮುಂದೆ ತ್ರಿಕೋನ ರಸ್ತೆಯ ಎಡ ಬದಿಯಲ್ಲಿ ಸಿಗುವ ನಿವಾಸಗಳ ಕುರಿತು.
ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಮನೆ ಮೊದಲು ಸಿಗುತ್ತದೆ. ಅವರ ಮನೆಯ ಸಾಲಿನಲ್ಲಿಯೇ ಸಾಗಿದಾಗ ಹಿರಿಯ ಮಾಜಿ ಮಂತ್ರಿಗಳ ಮನೆಯ ಸಾಲೇ ನಮಗೆ ಎದುರಾಗುತ್ತವೆ. ಸ್ವಚ್ಛಂದ ರಸ್ತೆ, ರಸ್ತೆಯ ತುದಿಯಲ್ಲಿಯೇ ಶಿವನ ದೇವಾಲಯ.
ಈ ರಸ್ತೆಯ ಸಾಲಿನಲ್ಲಿ ವಾಸಿಸುತ್ತಿದ್ದ ಬಹುತೇಕರು ಮಂತ್ರಿಗಳಾಗಿದ್ದವರು ತದನಂತರದಲ್ಲಿ ರಾಜ್ಯದ ಮುಖ್ಯಮಂತ್ರಿಯ ಸ್ಥಾನಕ್ಕೇರಿದವರು. ಅದರಲ್ಲಿ ದಿವಂಗತ ಗುಂಡೂರಾವ್, ದಿ. ಧರ್ಮಸಿಂಗ್, ದಿ. ಎಸ್.ಆರ್.ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ.
ಇದೇ ರಸ್ತೆಯಲ್ಲಿ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡರ ನಿವಾಸವೂ ಇತ್ತು. ಆದರೆ, ಕೆಲ ವರ್ಷಗಳ ಹಿಂದೆಯೇ ಅವರು ಬೇರೆಡೆಗೆ ಹೋದರು. ಕಾಂಗ್ರೆಸ್ನಲ್ಲಿದ್ದ ಸಂದರ್ಭದಲ್ಲಿ ಅವರ ಹೆಸರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿತ್ತು.
ಇದೇ ರಸ್ತೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಇದೀಗ ಹಾಲಿ ಮುಖ್ಯಮಂತ್ರಿಗಳಾಗಿದ್ದಾರೆ. ಇದು ಕಾಕತಾಳೀಯವೋ ಅಥವಾ ಈ ಪ್ರದೇಶದ ಗುಣಲಕ್ಷಣವೋ ತಿಳಿಯದಾಗಿದೆ.