ಬೆಂಗಳೂರು: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2023-24ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದಡಿ ಮೊದಲನೇ ಕಂತಿನ ಅನುದಾನವನ್ನು ಸರ್ಕಾರ ಇಂದು (ಗುರುವಾರ) ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಪ್ರದೇಶಾಭಿವೃದ್ಧಿ ಯೋಜನೆಯಡಿ 2023-24ನೇ ಸಾಲಿನ ಆಯವ್ಯಯ ಅಂದಾಜಿನಲ್ಲಿ ಮೊದಲನೆಯ ಕಂತಿನ ಅನುದಾನವನ್ನು (224 ವಿಧಾನಸಭಾ ಕ್ಷೇತ್ರಗಳು ಹಾಗೂ 67 ವಿಧಾನ ಪರಿಷತ್ ಸದಸ್ಯರಿಗೆ) ಪ್ರತಿ ಕ್ಷೇತ್ರಕ್ಕೆ ತಲಾ ರೂ.50 ಲಕ್ಷಗಳಂತೆ ಒಟ್ಟು 145.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಧಾನಸಭೆ ಸದಸ್ಯರುಗಳ ಅನುದಾನವನ್ನು ಉಪವಿಭಾಗಾಧಿಕಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಅನುದಾನವನ್ನು ಜಿಲ್ಲಾಧಿಕಾರಿಗಳು ನಿರ್ವಹಿಸುವಂತೆ ಸೂಚಿಸಲಾಗಿದೆ. ಆರ್ಥಿಕ ಇಲಾಖೆಯ ಸಹಮತಿಯ ಮೇರೆಗೆ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ, ಪ್ರಸ್ತುತ 2023-24ನೇ ಸಾಲಿನ ಮೊದಲನೆ ಕಂತಿನ ಅನುದಾನವನ್ನು ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಗೆ ಖಜಾನೆ-2ರ ಮೂಲಕ ಬಿಡುಗಡೆಗೊಳಿಸಲಾಗಿದೆ. ತದನಂತರ ಆಯಾ ಜಿಲ್ಲೆಯ, ಉಪವಿಭಾಗಾಧಿಕಾರಿಗಳಿಗೆ ಈ ಯೋಜನೆಯ ಅನುದಾನವನ್ನು ವರ್ಗಾವಣೆ ಮಾಡಲಾಗುತ್ತದೆ.
ನಿಯಮಾನುಸಾರ ಹಣ ಬಳಕೆ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ/ಉಪವಿಭಾಗಾಧಿಕಾರಿಗಳ ಮೇಲು ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ಬಿಡುಗಡೆ ಮಾಡಿದ ಅನುದಾನವನ್ನು ನಿಗದಿತ ಅವಧಿಯಲ್ಲಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕಾಂಗ್ರೆಸ್ ಶಾಸಕರೇ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾವಾರು ಕಾಂಗ್ರೆಸ್ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳ ಜೊತೆ ಸರಣಿ ಸಭೆ ನಡೆಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಶಾಸಕರುಗಳು ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದರು. ವಿಶೇಷ ಅನುದಾನ ಕೊಡುವುದು ಕಷ್ಟಸಾಧ್ಯವಾಗಿದ್ದು, ಆಯವ್ಯಯದಲ್ಲಿ ಒದಗಿಸಲಾಗಿರುವ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.
ಇದೀಗ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ 2023-24ನೇ ಸಾಲಿನ ಮೊದಲ ಕಂತಿನ 145.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶಿಸಲಾಗಿದೆ. 224 ಕ್ಷೇತ್ರಗಳು ಹಾಗೂ 67 ಎಂಎಲ್ಸಿಗಳಿಗೆ ತಲಾ 50 ಲಕ್ಷ ರೂ.ನಂತೆ ಅನುದಾನ ಬಿಡುಗಡೆ ಮಾಡಲು ಆದೇಶಿಸಲಾಗಿದೆ. 2023-24 ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ ಒಟ್ಟು 602.23 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ ಗುತ್ತಿಗೆ ಮತ್ತು ಹೊರಗುತ್ತಿಗೆಗಾಗಿ 1.93 ಕೋಟಿ ರೂ., ಸಾಮಾನ್ಯ ವೆಚ್ಚಗಳಿಗಾಗಿ 30 ಲಕ್ಷ ರೂ., ಬಂಡವಾಳ ವೆಚ್ಚವಾಗಿ 445 ಕೋಟಿ ರೂ., ಪರಿಶಿಷ್ಟ ಜಾತಿ ಉಪಯೋಜನೆಗೆ 110 ಕೋಟಿ ರೂ., ಗಿರಿಜನ ಉಪಯೋಜನೆಗಾಗಿ 45 ಕೋಟಿ ರೂ. ನಿಗದಿಯಾಗಿದೆ.
ಇದನ್ನೂ ಓದಿ : ರೈತ ಸಹಾಯವಾಣಿ ಕೇಂದ್ರದ ಉದ್ಘಾಟನೆ : ಬೆಳೆ ದರ್ಶಕ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಸಮಸ್ಯೆ ಇತ್ಯರ್ಥ