ಬೆಂಗಳೂರು: ಚಾಮರಾಜಪೇಟೆಯ ಸಿಸಿಬಿ ಕಚೇರಿ ಮುಂದಿರುವ ಕಟ್ಟಡದ ಐದನೇ ಮಹಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಶನಿವಾರ ನಡೆದಿದೆ.
ರಾಜ್ ಟವರ್ ಕಟ್ಟಡದ ಎರಡನೇ ಮಹಡಿಯಲ್ಲಿ ಮೈಕ್ರೊ ಮೆಡಿಕಲ್ ಫಾರ್ಮಾ ಡಿಸ್ಟ್ರಿಬ್ಯೂಟಿಂಗ್ ಮಳಿಗೆಯಲ್ಲಿ ಇದ್ದಕ್ಕಿದ್ದಂತೆ ಅಗ್ನಿ ಕಾಣಿಸಿಕೊಂಡಿದೆ. ನಂತರ ಕ್ಷಣಾರ್ಧದಲ್ಲಿ ಬೆಂಕಿ ಐದನೇ ಮಹಡಿವರೆಗೂ ವ್ಯಾಪ್ತಿಸಿದೆ. ಕೂಡಲೇ ಅಗ್ನಿಶಾಮಕ ಇಲಾಖೆಗೆ ಸ್ಥಳೀಯರು ಕರೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ತೆರಳಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲದೆ ಕಟ್ಟಡದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆದಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.