ಬೆಂಗಳೂರು : ಚಾಮರಾಜಪೇಟೆಯ ಆನಂದಪುರದಲ್ಲಿರುವ ಥರ್ಮಾಕೋಲ್ ಗೋದಾಮಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಅಕ್ಕಪಕ್ಕದ ಆರೇಳು ಮನೆಗಳಿಗೆ ಬೆಂಕಿಯ ಕೆನ್ನಾಲಿಗೆ ಆವರಿಸಿ ಸುಟ್ಟು ಕರಕಲು ಮಾಡಿದೆ. ಗೋದಾಮಿನಲ್ಲಿ ಡಿಸೈನ್ ಕೆಲಸ ಮಾಡಲಾಗುತ್ತಿತ್ತು. ಸುತ್ತಮುತ್ತಲೂ ಶೀಟ್ ಹಾಕಿದ್ದ ಮನೆಗಳಿದ್ದವು. ಗೋದಾಮಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಅಕ್ಕಪಕ್ಕದ ಆರೇಳು ಮನೆಗಳಿಗೆ ವಿಸ್ತರಿಸಿದೆ.
ಇದೇ ವೇಳೆ ಸ್ಥಳದಲ್ಲಿದ್ದ ಐದು ಗ್ಯಾಸ್ ಸಿಲಿಂಡರ್ ಗಳ ಪೈಕಿ ಮೂರು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಆ ಸಂದರ್ಭದಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ಅಸೀಫ್ ಉಲ್ಲಾ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲ ಮನೆಗಳು ಸುಟ್ಟ ಭಸ್ಮವಾಗಿದ್ದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಮನೆಗಳ ಮುಂದೆ ಪಾರ್ಕ್ ಮಾಡಲಾಗಿದ್ದ ಬೈಕ್ಗಳು ಬೆಂಕಿಗೆ ಆಹುತಿಯಾಗಿವೆ. ಮನೆಯ ಮಾಲೀಕರಾದ ಆಶಾ ಎಂಬುವರು ಗಣೇಶ ಹಬ್ಬಕ್ಕೆಂದು 50 ಸಾವಿರ ರೂಪಾಯಿ ಬಡ್ಡಿ ಸಾಲ ತಂದು ಮನೆಯ ಲಾಕರ್ನಲ್ಲಿ ಇಟ್ಟುಕೊಂಡಿದ್ದರು. ಮನೆಗೆ ಬೆಂಕಿ ಬಿದ್ದ ಪರಿಣಾಮ ಎಲ್ಲವೂ ಸುಟ್ಟು ಹೋಗಿವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎರಡು ವಾಹನಗಳಲ್ಲಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಾಮರಾಜಪೇಟೆ ಪೊಲೀಸರು ಭಾಗ್ಯಮ್ಮ ಎಂಬುವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ : ಇನ್ನೊಂದೆಡೆ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲಕ್ಕಯ್ಯ ಬಡಾವಣೆಯ ಪೊಲಮ್ಮಾಸ್ ಹೋಟೆಲ್ ಬಳಿ (ಆಗಸ್ಟ್ 24-2023) ನಡೆದಿತ್ತು. ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲಮ್ಮಾಸ್ ಮೆಸ್ ಪಕ್ಕದ ಬಿಲ್ಡಿಂಗ್ನ ಕೆಳಮಹಡಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿತ್ತು. ಪರಿಣಾಮ, ಕಟ್ಟಡದ ಹೊರಭಾಗದಲ್ಲಿ ಮಲಗಿದ್ದ ರವಿ (40) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಳೆದ ಕೆಲ ವರ್ಷಗಳಿಂದ ಪೊಲಮ್ಮಾಸ್ ಎಂಬ ಆಂಧ್ರ ಮೆಸ್ ನಡೆಸಲಾಗುತ್ತಿದ್ದು, ಎರಡನೇ ಮಹಡಿಯಲ್ಲಿ ಅಡುಗೆ ಮಾಡಲಾಗುತ್ತದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಕ್ಕದ ಬಿಲ್ಡಿಂಗ್ನ ಕೆಳ ಮಹಡಿಯಲ್ಲಿ ಉಳಿದುಕೊಳ್ಳಲು ಮನೆ ಮಾಡಿ ಕೊಟ್ಟಿದ್ದು, ಅಲ್ಲಿಯೇ ಸಿಲಿಂಡರ್ಗಳನ್ನು ಸ್ಟೋರ್ ಮಾಡಿ ಇಡಲಾಗಿತ್ತು. ಮೇಲಿರುವ ಮೆಸ್ ಕಿಚನ್ಗೆ ಈ ಕೆಳಮಹಡಿಯಲ್ಲಿ ಇಟ್ಟಿರುವ ಸಿಲಿಂಡರ್ಗಳ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿತ್ತು. ರೆಡ್ ಪೈಪ್ ಮೂಲಕ ಈ ಬಿಲ್ಡಿಂಗ್ನಿಂದ ಮೆಸ್ ಬಿಲ್ಡಿಂಗ್ಗೆ ಗ್ಯಾಸ್ ಕನೆಕ್ಷನ್ ಕೊಡಲಾಗಿದ್ದು, ಎಂದಿನಂತೆ ಅಂದು ಸಹ ಮೆಸ್ನ ಕಿಚನ್ನಲ್ಲಿ ಅಡುಗೆ ಮಾಡಲು ಶುರು ಮಾಡಲಾಗಿತ್ತು. ಈ ವೇಳೆ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದು, ಅದನ್ನ ಬದಲಾಯಿಸುವಾಗ ಪೈಪ್ನ ಮೂಲಕ ಗ್ಯಾಸ್ ರಿಫ್ಲೆಕ್ಟರ್ ಒಡೆದು ಸಿಲಿಂಡರ್ ಸ್ಫೋಟವಾಗಿದೆ ಎಂಬ ಮಾಹಿತಿ ಸಿಕ್ಕಿತ್ತು.
ಇದನ್ನೂ ಓದಿ: Cylinder blast: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ.. ಓರ್ವ ಸಾವು, ಇಬ್ಬರಿಗೆ ಗಾಯ