ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ದಾಖಲಿಸಿರುವ ಎಫ್ಐಆರ್ ವಾಪಸ್ ಪಡೆಯಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿತು.
![FIR registered against Sonia Gandhi](https://etvbharatimages.akamaized.net/etvbharat/prod-images/kn-bng-06-dks-cm-meet-video-7208080_21052020173706_2105f_02494_538.jpg)
ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಸೇರಿದಂತೆ ಪ್ರಮುಖ ನಾಯಕರು ಸಾಥ್ ನೀಡಿದ್ದರು. ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ಕೈಬಿಡಬೇಕು, ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದರು.
![FIR registered against Sonia Gandhi](https://etvbharatimages.akamaized.net/etvbharat/prod-images/kn-bng-04-dks-letter-to-cm-script-7208077_21052020155446_2105f_1590056686_352_2105newsroom_1590063004_615.jpg)
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಶಿವಮೊಗ್ಗದ ಪ್ರವೀಣ್ ಕುಮಾರ್ ಎಂಬ ವಕೀಲ, ಪೊಲೀಸ್ ಅಧಿಕಾರಿಯೊಬ್ಬರ ಜೊತೆ ಸೇರಿ ಒಂದು ದೂರು ಕೊಟ್ಟು ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಇದು ಸೂಕ್ಷ್ಮ ವಿಚಾರ, ಇಡೀ ದೇಶದಲ್ಲೇ ಸಂಚಲವನ್ನು ಉಂಟುಮಾಡುವ ವಿಚಾರ, ದ್ವೇಷದ ಮನೋಭಾವ, ಅಧಿಕಾರ ದುರುಪಯೋಗದ ವಿಚಾರ ಇದು, ಪ್ರತಿಪಕ್ಷಗಳು ಯಾವ ಮಟ್ಟಕ್ಕೆ ಕೆಲಸ ಮಾಡಬೇಕು ಎನ್ನುವ ದೊಡ್ಡ ಚರ್ಚೆ ಕೂಡ ನಾವು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಗೃಹ ಸಚಿವರ ಜತೆ ಮಾತನಾಡಿದ್ದು, ಈಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ ಎಂದರು.
![FIR registered against Sonia Gandhi](https://etvbharatimages.akamaized.net/etvbharat/prod-images/768-512-6907324-440-6907324-1587630010683_2105newsroom_1590049005_73.jpg)
ಇದು ಸೂಕ್ಷ್ಮ ವಿಚಾರ, ಹಾಗಾಗಿ ನಾವು ಹೋರಾಟ ಮಾಡುವ ಮೊದಲು ನಮ್ಮ ಪಕ್ಷದ ಪರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಇದಕ್ಕೆ 24 ಗಂಟೆಯಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗುತ್ತದೆ. ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಒಂದು ನಿಮಿಷದ ಚರ್ಚೆಗೂ ಅವಕಾಶ ನೀಡದೇ ನಮಗೆ ಭರವಸೆ ನೀಡಿದ್ದಾರೆ ಎಂದರು.