ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿ ಸಂಜಯ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಪೊಲೀಸರು ಎಫ್ಐಆರ್ನಲ್ಲಿ ಆರೋಪಿಗಳ ಹೆಸರು ನಮೂದಿಸಿದ್ದಾರೆ. ಎ1 ಆರೋಪಿ ಸೂರ್ಯ, ಎ2 ಆರೋಪಿ ಪೀಟರ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಸಿ 34, 302 ಅಡಿ ಪ್ರಕರಣ ದಾಖಲಾಗಿದೆ.
'ನಿನ್ನೆ ಬೆಳಗ್ಗೆ 10 ರಿಂದ 10.30 ಸುಮಾರಿಗೆ ನಾನು ಮನೆಯಲ್ಲಿದ್ದೆ. ಅಕ್ಕ ಕಸ್ತೂರಿ ಏಕಾಏಕಿ ಕೂಗಿಕೊಂಡರು. ರೇಖಾ ಕದಿರೇಶ್ ಅವರಿಗೆ ಅವರ ಕಚೇರಿ ಬಳಿ ಚಾಕುವಿನಿಂದ ಹೊಡೆದು ರಕ್ತಗಾಯ ಮಾಡಿರುವುದಾಗಿ ತಿಳಿಸಿದ್ದರು. ಕೂಡಲೇ ಕಚೇರಿ ಬಳಿ ತೆರಳಿದಾಗ ದೊಡ್ಡಮ್ಮ ರೇಖಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಯಾರೋ ಹರಿತವಾದ ಆಯುಧದಿಂದ ಕುತ್ತಿಗೆ, ಎದೆಭಾಗ, ಹೊಟ್ಟೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದರು.' ಎಂದು ಸಂಬಂಧಿ ಸಂಜಯ್ ಎಫ್ಐಆರ್ನಲ್ಲಿ ನಮೂದಿಸಿದ್ದಾರೆ.
ಇಸ್ಕಾನ್ನಿಂದ ಊಟ ವಿತರಣೆ ಮಾಡಿ ಬರುವಾಗ ಈ ಘಟನೆ ನಡೆದಿದೆ. ಸ್ವಲ್ಪ ದೂರ ಹೋಗಿ ನೋಡಿದಾಗ ಸೂರ್ಯ, ಪೀಟರ್ ಕೃತ್ಯ ನಡೆದ ಸ್ಥಳದಲ್ಲಿ ದೂರದಲ್ಲೇ ಇದ್ದರು. ಪ್ರವೀಣ್ ಎಂಬುವರು ಆಟೋದಲ್ಲಿ ಉಸಿರಾಡುತ್ತಿದ್ದ ರೇಖಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದರು. ಅಲ್ಲಿನ ವೈದ್ಯರು ಕೊರೊನಾ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದಾಗಿ ಹೇಳಿದರು. ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿ ಸಂಜಯ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.