ಬೆಂಗಳೂರು: ಡ್ರೋನ್ ಪ್ರತಾಪ್ ಪದೇ ಪದೇ ಸುದ್ದಿಯಾಗುತ್ತಿದ್ದಾನೆ. ಈ ಹಿಂದೆ ಆತ ಡ್ರೋನ್ ತಯಾರು ಮಾಡಿದ್ದೇ ಸುಳ್ಳು ಎಂದು ಎಲ್ಲಾ ಕಡೆ ಹರಿದಾಡುತ್ತಿದ್ದ ಸುದ್ದಿಗೆ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಸ್ಪಷ್ಟನೆ ನೀಡಲು ಬಂದು ಪೊಲೀಸರ ಅತಿಥಿಯಾಗಿದ್ದ. ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾನೆ.
ಕ್ವಾರಂಟೈನ್ ನಿಯಮ ಪಾಲಿಸದ ಹಿನ್ನೆಲೆ ಡ್ರೋನ್ ಪ್ರತಾಪ್ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಪ್ರತಾಪ್ ವಿರುದ್ಧ ಕಳೆದ 15 ದಿನಗಳ ಹಿಂದೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಎರಡನೇ ಪ್ರಕರಣ ದಾಖಲಾಗಿದೆ. ಜೂನ್ 20 ರಂದು ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿರುವಾಗಲೇ ವಕೀಲರನ್ನು ತನ್ನ ಹೊಟೇಲ್ಗೆ ಕರೆದುಕೊಂಡು ಬಂದು ಗಂಟೆಗಳ ಕಾಲ ಮಾತನಾಡಿದ್ದಾನೆ ಎನ್ನಲಾಗ್ತಿದೆ. ಈ ಹಿನ್ನೆಲೆ ಪ್ರತಾಪ್ ಎರಡನೇ ಬಾರಿಗೆ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಾನೆ.
ಸಾಂಸ್ಥಿಕ ಕ್ವಾರಂಟೈನ್ ಇಂದಿಗೆ ಮುಗಿಯುವ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಪಾಲನೆಯ ಉಸ್ತುವಾರಿ ಪಿಆರ್ಎಸ್ ಚೇತನ್ ನೇತೃತ್ವದ ತಂಡ ಡ್ರೋನ್ ಪ್ರತಾಪ್ ನನ್ನು ವಿಚಾರಣೆಗೆ ಒಳಪಡಿಸಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪ್ರತಾಪ್ನನ್ನು ನಾವು ಕರೆದುಕೊಂಡು ಬಂದು ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದೆವು. ಕ್ವಾರಂಟೈನ್ನಲ್ಲಿರುವಾಗ ಕೂಡ ಆತ ನಿಯಮ ಉಲ್ಲಂಘಿಸಿದ್ದಾನೆ. ಈ ಹಿನ್ನೆಲೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿಕೊಂಡಿದ್ದೇವೆ ಎಂದರು.
ವೈದ್ಯರು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿ, ವೈದ್ಯರ ಮೇಲೆ ಆರೋಪ ಮಾಡುತ್ತಿರುವುದು ಸುಳ್ಳು. ಎಲ್ಲಾ ರೋಗಿಗಳನ್ನು ನೋಡಿಕೊಂಡಿರುವಂತೆ ಆತನನ್ನೂ ವೈದ್ಯರು ನೋಡಿಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.