ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಆರೋಪಿಸಿ ಸಂಸದರೊಬ್ಬರ ಪುತ್ರನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ. ಬೆಂಗಳೂರು ಮೂಲದ ಯುವತಿಗೆ ವಂಚಿಸಿರುವ ಆರೋಪ ಮಾಡಲಾಗಿದೆ.
ಯುವತಿ ದೂರಿನಲ್ಲಿ ಉಲ್ಲೇಖಿಸಿರುವುದು ಏನನ್ನ?: ''ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ, ಒಂದೂವರೆ ವರ್ಷದ ಹಿಂದೆ ಸ್ನೇಹಿತೆಯರ ಮೂಲಕ ನನ್ನೊಂದಿಗೆ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಕಳೆದ ಜನವರಿಯಲ್ಲಿ ಮೈಸೂರಿನ ಹೊಟೇಲ್ವೊಂದರಲ್ಲಿ ಮದ್ಯ ಸೇವನೆ ಮಾಡಿ ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದರು. ಕೆಲ ದಿನಗಳ ಬಳಿಕ ವಿವಾಹವಾಗುವಂತೆ ಕೇಳಿದ್ದೆ. ಆದರೆ, ಈ ವ್ಯಕ್ತಿ ಆ ಬಳಿಕ ನಿರಾಕರಿಸಿದ್ದರು. ನಾನು ನಿನ್ನನ್ನು ಮದುವೆಯಾಗುವುದಿಲ್ಲ, ಏನು ಮಾಡಿಕೊಳ್ತೀಯಾ ಮಾಡಿಕೋ ಎಂದು ಧಮ್ಕಿ ಹಾಕಿದ್ದಾರೆ'' ಎಂದು ಸಂತ್ರಸ್ತೆ ಯುವತಿಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'' ಅವರು ಮತ್ತು ನನ್ನ ನಡುವಿನ ಈ ವಿಚಾರವನ್ನು ಅವರ ತಂದೆಯ ಗಮನಕ್ಕೂ ತರಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೇ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿರುವೆ'' ಎಂದು ದೂರಿನಲ್ಲಿ ಯುವತಿ ಹೇಳಿಕೊಂಡಿದ್ದಾರೆ.
ಈ ದೂರು ಹಿನ್ನೆಲೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 420, 417, 506 ಅಡಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮೈಸೂರಿನಲ್ಲಿ ದಾಖಲಾಯ್ತು ಪ್ರತಿ ದೂರು: ಇನ್ನು ಮಹಿಳೆಯ ವಿರುದ್ಧ ಸಂಸದರ ಪುತ್ರ ಎನ್ನಲಾಗಿರುವ ವ್ಯಕ್ತಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ''ತನ್ನ ಜೊತೆಗಿದ್ದ ಖಾಸಗಿ ಪೋಟೋ ಹಾಗೂ ಮಾತನಾಡಿರುವ ಆಡಿಯೋ ಇಟ್ಟುಕೊಂಡು ಆ ಮಹಿಳೆ ಬೆದರಿಕೆ ಹಾಕುತ್ತಿದ್ದಾರೆ. 15 ಲಕ್ಷ ಹಣ ನೀಡಬೇಕು, ಇಲ್ಲದಿದ್ದರೆ ತನ್ನ ಪತ್ನಿಗೆ ಆ ಖಾಸಗಿ ಪೋಟೋ ಮತ್ತು ಆಡಿಯೋ ಕಳುಹಿಸುವುದಾಗಿ ಹೆದರಿಸುತ್ತಿದ್ದಾರೆ. ಇವರುಗಳ ಬೆದರಿಕೆಗೆ ಹೆದರಿ ನನ್ನ ಖಾತೆಯಿಂದ ಆರಂಭದಲ್ಲಿ ಸುಮಾರು 3,2500 ರೂ. ಅವರ ಖಾತೆಗೆ ಹಾಕಿದ್ದೆ. ಆದರೆ, ಪದೇ ಪದೇ ನನಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ನೀಡುತ್ತಿದ್ದರು. ಹಣ ನೀಡಲು ಸಾಧ್ಯವಿಲ್ಲ ಅಂತ ಅಂದಾಗ ಕೊಲೆ ಬೆದರಿಕೆ ಹಾಕಿದ್ದರು. ಪುನಃ 10 ಲಕ್ಷ ಹಣವನ್ನು ನೀಡಿದ ಬಳಿಕ ಕಿರುಕುಳ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ, ಮತ್ತೆ ಕಿರುಕುಳ ಹಣಕ್ಕಾಗಿ ಪೀಡಿಸುತ್ತಿದ್ದಾಳೆ. ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ್ದಾರೆ'' ಎಂದು ಆರೋಪಿಸಿ ಮಹಿಳೆ ಸೇರಿ ಮತ್ತೊಬ್ಬನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸಂಸದರ ಪುತ್ರ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ಪುತ್ರನ ವಿರುದ್ಧ ಪ್ರೀತಿಸಿ ವಂಚಿಸಿದ ಆರೋಪ: ಬಳ್ಳಾರಿ ಸಂಸದ ದೇವೇಂದ್ರಪ್ಪ ಪ್ರತಿಕ್ರಿಯೆ ಹೀಗಿದೆ