ಬೆಂಗಳೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿರುವುದು ದುರದೃಷ್ಟಕರ ಎಂದು ಭಾರತೀಯ ಆಡಳಿತ ಸೇವಾ ಅಧಿಕಾರಿಗಳ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಹೊರಡಿಸಿರುವ ಸಂಘ, ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ಜಿಲ್ಲೆಯ ಅಧಿಕಾರಿಗಳು ಶಕ್ತಿ ಮೀರಿ ಜಾರಿಗೊಳಿಸುತ್ತಿದ್ದಾರೆ. ಮೈಸೂರು ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಅಧಿಕಾರಿಗಳ ನೈತಿಕತೆಯನ್ನು ಕುಂದಿಸುತ್ತದೆ. ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಕ್ಷೀಣಿಸುವಂತೆ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
![FIR against CEO is unfortunate: IAS Officers Association](https://etvbharatimages.akamaized.net/etvbharat/prod-images/kn-bng-09-iasofficerunion-firceo-script-7201951_25082020233444_2508f_1598378684_546.jpg)
ಫೀಲ್ಡ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಎಲ್ಲಾ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಬೆಂಬಲಿಸಬೇಕು. ಐಎಎಸ್ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕಾಗಿ 24 ತಾಸು ಕೆಲಸ ಮಾಡುತ್ತಿದ್ದಾರೆ. ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿರುವುದು ಅತ್ಯಂತ ದುರದೃಷ್ಟಕರ ವಿಚಾರವಾಗಿದೆ. ಅವರ ಆತ್ಮಹತ್ಯೆಗೆ ಕಾರಣ ಯಾರಿಗೂ ಗೊತ್ತಿಲ್ಲ. ತನ್ನ ಕರ್ತವ್ಯ ನಿರ್ವಹಿಸಿದ ಅಧಿಕಾರಿಯನ್ನು ದೂಷಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದೆ.
ತಮ್ಮ ಸಾಮರ್ಥ್ಯ ಮೀರಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಜೊತೆ ರಾಜ್ಯ ಸರ್ಕಾರ ನಿಲ್ಲಬೇಕು ಎಂದು ಸಂಘವು ಮನವಿ ಮಾಡಿದೆ.