ದೇವನಹಳ್ಳಿ: ಬೆಂಗಳೂರಿನ ಯುವಕನೋರ್ವ ಸಂದರ್ಶನಕ್ಕೆ ಹಾಜರಾಗಲು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಿದ್ದ. ಆದರೆ ಲಗೇಜ್ ಮಾತ್ರ ಬೆಂಗಳೂರಿನ ಏರ್ ಪೋರ್ಟ್ ನಲ್ಲಿಯೇ ಉಳಿದಿತ್ತು. ಇದರಿಂದ ಸೂಕ್ತ ಸಮಯಕ್ಕೆ ಸಂದರ್ಶನಕ್ಕೆ ಹೋಗಲಾಗದೆ ಒಳ್ಳೆಯ ಕೆಲಸ ಕೈತಪ್ಪುವಂತಾಯ್ತು.
ಇದರಿಂದ ಬೇಸರಗೊಂಡ ಯುವಕ ಸ್ಪೈಸ್ ಜೆಟ್ ನಿರ್ಲಕ್ಷ್ಯತೆ ಬಗ್ಗೆ ಕನ್ಸ್ಯೂಮರ್ ಫೋರಂನಲ್ಲಿ ಪ್ರಕರಣ ದಾಖಲಿಸಿದ್ದ. ಪ್ರಯಾಣಿಕರಿಗೆ ತೊಂದರೆ ಕೊಟ್ಟ ಸ್ಪೈಸ್ ಜೆಟ್ಗೆ 18 ಸಾವಿರ ರೂಪಾಯಿ ದಂಡ ಹಾಕಿದ ಕನ್ಸ್ಯೂಮರ್ ಫೋರಂ, ಆ ಹಣವನ್ನು ಪ್ರಯಾಣಿಕನಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.
ಏನಿದು ಘಟನೆ?
ಬೆಂಗಳೂರಿನ ಹನುಮಂತನಗರ ನಿವಾಸಿ ನವೀನ್ ಎಂಬುವವರು ಸ್ಕಿಲ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಹಿಮಾಚಲ ಪ್ರದೇಶದ ಸೋಲಾನ್ನಲ್ಲಿ ಉದ್ಯೋಗ ಒಂದರ ಸಂದರ್ಶನಕ್ಕೆ ಹಾಜರಾಗಲು 2019ರ ಮೇ 2ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಸ್ಪೈಸ್ ಜೆಟ್ ನಲ್ಲಿ ಪ್ರಯಾಣ ಮಾಡಿದ್ದರು. ಆದರೆ ದೆಹಲಿ ತಲುಪಿದ್ದಾಗ ನವೀನ್ ಲಗೇಜ್ ಅನ್ನು ಚೆಕ್ ಇನ್ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ತಂದಿದ್ದ ಡಾಕ್ಯುಮೆಂಟ್ಗಳೆಲ್ಲವೂ ಬೆಂಗಳೂರಲ್ಲೇ ಉಳಿದಿದ್ದವು. ಈ ಬಗ್ಗೆ ಸ್ಪೈಸ್ ಜೆಟ್ ಅಧಿಕಾರಿಗಳನ್ನು ಭೇಟಿಯಾದರೂ ತಕ್ಷಣಕ್ಕೆ ಯಾವುದೇ ಉಪಯೋಗವಾಗಿರಲಿಲ್ಲ.
ಸ್ಪೈಸ್ ಜೆಟ್ ಸಿಬ್ಬಂದಿ ನವೀನ್ರ ಲಗೇಜ್ ಅನ್ನು ಬೆಂಗಳೂರಿನಿಂದ ಲೋಡ್ ಮಾಡಿಯೇ ಇರಲಿಲ್ಲ. ಲಗೇಜ್ ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಇದ್ದಿದ್ದರಿಂದ ಅದನ್ನು ಬೆಂಗಳೂರಿನಲ್ಲೇ ಇರಿಸಲಾಯಿತ್ತು. ಇನ್ನೊಂದು ಗಂಟೆಯಲ್ಲಿ ಹೊರಡುವ ಮತ್ತೊಂದು ವಿಮಾನದಲ್ಲಿ ಲಗೇಜನ್ನು ತರಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಇವರ ಮಾತನ್ನು ನಂಬಿ ನವೀನ್ 6 ಗಂಟೆಗಳ ಕಾಲ ದೆಹಲಿ ಏರ್ ಪೋರ್ಟ್ನಲ್ಲಿ ಕಾಯುತ್ತಾ ಕುಳಿತಿದ್ದರು.
ಸ್ಪೈಸ್ ಜೆಟ್ನ ಮತ್ತೊಂದು ವಿಮಾನ ಬೆಂಗಳೂರಿನಿಂದ ಬರುವ ವೇಳೆಗೆ ನವೀನ್ ಹಿಮಾಚಲ ಪ್ರದೇಶದ ಸೋಲನ್ಗೆ ಹೋಗಬೇಕಾಗಿದ್ದ ಬಸ್ ಹೋಗಿ ಆಗಿತ್ತು. ಆ ಬಸ್ನಲ್ಲಿ ಹೋಗಿ ಮಾರನೇ ದಿನವೇ ನವೀನ್ ಇಂಟರ್ವ್ಯೂಗೆ ಹಾಜರಾಗಬೇಕಿತ್ತು. ಆದರೆ, ಸ್ಪೈಸ್ ಜೆಟ್ನವರ ನಿರ್ಲಕ್ಷ್ಯದಿಂದ ನವೀನ್ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದೆ ಕೆಲಸ ಕಳೆದಕೊಂಡಿದ್ದರು.