ಬೆಂಗಳೂರು: 71 ವರ್ಷದ ವೃದ್ಧೆಗೆ ಸೇರಿದ ಜಮೀನಿನ ಸರ್ವೇ ಮಾಡಿ ಪೋಡಿ, ದುರಸ್ತಿ ಮಾಡುವಂತೆ ಎಂಟು ವರ್ಷದ ಹಿಂದೆ ಹೊರಡಿಸಿದ್ದ ಆದೇಶ ಪಾಲಿಸದ ಮಂಡ್ಯ ಜಿಲ್ಲೆಯ ಪಾಂಡವಪುರದ ತಹಸೀಲ್ದಾರ್ಗಳಿಗೆ ಹೈಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುರಹಳ್ಳಿ ಗ್ರಾಮದ ವೃದ್ಧೆ ಪಾರ್ವತಮ್ಮ ಎಂಬವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಲೇವಾರಿ ಮಾಡಿರುವ ನ್ಯಾ.ಬಿ.ವೀರಪ್ಪ ಮತ್ತು ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅಲ್ಲದೇ, 2014ರ ಜುಲೈ 24ರಿಂದ 2022ರ ಫೆ. 10ರವರೆಗೆ ಪಾಂಡವಪುರ ತಾಲೂಕಿನಲ್ಲಿ ತಹಸೀಲ್ದಾರ್ ಗಳಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಂದ ಈ ದಂಡದ ಮೊತ್ತವನ್ನು ವಸೂಲು ಮಾಡಬೇಕು, ಈ ವಿಚಾರವನ್ನು ಅವರ ಸೇವಾ ದಾಖಲೆಯಲ್ಲೂ ನಮೂದಿಸಬೇಕು ಎಂದು ಕೋರ್ಟ್ ತಿಳಿಸಿದೆ. ಜೊತೆಗೆ, ಒಂದು ತಿಂಗಳಲ್ಲಿ ಅರ್ಜಿದಾರರಿಗೆ ದಂಡದ ಮೊತ್ತವನ್ನು ಪಾವತಿಸಬೇಕು, ಆ ಕುರಿತು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಯವರ ವಿರುದ್ಧ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ ಎಂದೂ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ನ್ಯಾಯಾಂಗ ನಿಂದನೆ ಅರ್ಜಿ ದಾಖಲಾದ ನಂತರ ನ್ಯಾಯಪೀಠದ ನೋಟಿಸ್ ಆಧರಿಸಿ ಸರ್ಕಾರದ ರ್ಮುಖ್ಯ ಕಾರ್ಯದರ್ಶಿ 2022ರಲ್ಲಿ ಜನವರಿಯಲ್ಲಿ ಜನರ ಭೂಮಿಯ ಸರ್ವೇ, ಪೋಡಿ ಮತ್ತು ದುರಸ್ತಿಗೆ ಸಂಬಂಸಿದಂತೆ ವಿವರವಾದ ಮಾರ್ಗಸೂಚಿ ಹೊರಡಿಸಿದ್ದಾರೆ. ಅದನ್ನೂ ಸಹ ಅಧಿಕಾರಿಗಳು ಪಾಲನೆ ಮಾಡದಿರುವುದು ದುರದೃಷ್ಟಕರ ಎಂದಿದೆ.
ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುರಹಳ್ಳಿ ಗ್ರಾಮದ ವೃದ್ಧಿ ಪಾರ್ವತಮ್ಮ ತಮ್ಮ ಭೂಮಿಯ ಸರ್ವೇ ಹಾಗೂ ಪೋಡಿ ಮಾಡಿಕೊಡಲು ನಿರ್ದೇಶನ ನೀಡುವಂತೆ ಕೋರಿ 2014ರಲ್ಲಿ ಹೈಕೋರ್ಟ್ ಏಕಸದಸ್ಯಪೀಠದ ಮೊರೆ ಹೋಗಿದ್ದರು. ಅರ್ಜಿ ಆಲಿಸಿದ ನ್ಯಾಯಪೀಠ 2014ರ ಜು.24ರಂದು 9 ತಿಂಗಳಲ್ಲಿ ಅರ್ಜಿದಾರರಿಗೆ ಸೇರಿದ ಜಮೀನಿನ ಪೋಡಿ, ದುರಸ್ತಿ ಮಾಡಿಕೊಡಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಆದೇಶ ನೀಡಿತ್ತು.
ಈ ಆದೇಶವನ್ನು ಅಧಿಕಾರಿಗಳು ಪಾಲನೆ ಮಾಡಿರಲಿಲ್ಲ. ಆನಂತರ 2014ರಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಹೂಡಿದ್ದರು. ಆನಂತರ ಎಚ್ಚೆತ್ತುಕೊಂಡ ಕಂದಾಯ ಅಧಿಕಾರಿಗಳು 2022ರ ಫೆ.10ರಂದು ಸರ್ವೇ ಮಾಡಿದ್ದರು.
ಇದನ್ನೂ ಓದಿ: ಶುಲ್ಕ ನಿಗದಿ ಮಾಡಿಕೊಳ್ಳಲು ಖಾಸಗಿ ಶಾಲೆಗಳು ಅರ್ಹವಾಗಿವೆ: ಹೈಕೋರ್ಟ್