ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಈ ಹಿನ್ನೆಲೆ ದುಂದುವೆಚ್ಚ ಕಡಿತ, ಮಿತವ್ಯಯದ ಮೊರೆ ಹೋಗಿರುವ ಸರ್ಕಾರ ಕೆಲವು ಇಲಾಖೆಗಳ ವಿಲೀನ ಮತ್ತು ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ.
ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ರಚನೆಯಾಗಿರುವ ಸಚಿವ ಸಂಪುಟದ ಉಪಸಮಿತಿ ಮೊದಲ ಸಭೆ ನಡೆಸಿದ್ದು, ಈ ಸಂಬಂಧ ಚರ್ಚೆ ನಡೆಸಲಾಗಿದೆ. ಕೆಲ ಇಲಾಖೆಗಳ ವಿಲೀನ ಸಾಧ್ಯತೆ ಸಂಬಂಧ 15 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವ ಇಲಾಖೆಯೊಂದಿಗೆ ಯಾವ ಇಲಾಖೆಯನ್ನು ವಿಲೀನಗೊಳಿಸಬಹುದು, ಅನಗತ್ಯವಾಗಿರುವ ಯಾವ ಹುದ್ದೆಗಳನ್ನು ರದ್ದುಗೊಳಿಸಬಹುದು ಎಂಬ ಕುರಿತು 15 ದಿನದಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದೆ.
ಈ ನಿಟ್ಟಿನಲ್ಲಿ ಮೂವರು ಐಎಎಸ್ ಅಧಿಕಾರಿಗಳಾದ ಮೌನೀಶ್ ಮೌದ್ಗಿಲ್, ಎಸ್.ಜಿ.ರವೀಂದ್ರ ಮತ್ತು ಏಕ್ ರೂಪ್ ಕೌರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಹಲವು ಇಲಾಖೆಗಳಲ್ಲಿ ಅನಗತ್ಯ ಹುದ್ದೆಗಳಿವೆ. ಕೆಲಸ ಇರುವ ಕಡೆ ಸಿಬ್ಬಂದಿ ಇಲ್ಲ. ಹೀಗಾಗಿ ಅವುಗಳನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರವು ಇಲಾಖೆಗಳಲ್ಲಿನ ಮತ್ತು ಅನಗತ್ಯ ಹುದ್ದೆಗಳ ರದ್ದುಗೊಳಿಸುವ ಕ್ರಮಕ್ಕೆ ಮುಂದಾಗಿದೆ.
ಯಾವ ಹುದ್ದೆಗಳಿಗೆ ಕತ್ತರಿ ಚಿಂತನೆ?
ಪ್ರಾದೇಶಿಕ ಆಯುಕ್ತರ ಹುದ್ದೆ, ಕೃಷಿ ಇಲಾಖೆಯಲ್ಲಿನ ಜಂಟಿ ನಿರ್ದೇಶಕರ ಹುದ್ದೆ, ಒಂದೇ ಇಲಾಖೆಯಲ್ಲಿರುವ ಎರಡೆರಡು ಪ್ರಧಾನ ಕಾರ್ಯದರ್ಶಿ ಹುದ್ದೆ, ಎರಡೆರಡು ಆಯುಕ್ತರ ಹುದ್ದೆ ರದ್ದತಿಗೆ ಯೋಜಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಸಿಬ್ಬಂದಿ, ಎಂಜಿನಿಯರಿಂಗ್ ಹುದ್ದೆಗಳು, ಜಲಸಂಪನ್ಮೂಲ ಇಲಾಖೆಗಳಲ್ಲಿನ ಕೆಲ ಹುದ್ದೆಗಳಿಗೆ ಕತ್ತರಿ ಹಾಕುವ ಯೋಚನೆ ಇದೆ.
ಯಾವ ಇಲಾಖೆಗಳ ವಿಲೀನ ಚಿಂತನೆ?
ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಸಮಾಜಕಲ್ಯಾಣ ಇಲಾಖೆ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಇಲಾಖೆ, ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ, ರಾಜ್ಯ ಲೆಕ್ಕ ಪರಶೀಲನಾ ಇಲಾಖೆ ಮತ್ತು ಲೆಕ್ಕ ಪತ್ರ ಇಲಾಖೆ, ಕಾನೂನು ಮಾಪನ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಭಾಷಾಂತರ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಇನ್ನಿತರ ಕೆಲ ಇಲಾಖೆಗಳನ್ನು ವಿಲೀನಗೊಳಿಸಲು ಚಿಂತನೆ ನಡೆದಿದೆ. ಅನಗತ್ಯ ಹುದ್ದೆಗಳ ರದ್ದು ಮತ್ತು ಇಲಾಖೆಗಳ ವಿಲೀನದಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ 2 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.