ಬೆಂಗಳೂರು: ಜೀವಮಾನವಿಡಿ ಕಳ್ಳತನವನ್ನೇ ಫುಲ್ ಟೈಂ ವೃತ್ತಿಯನ್ನಾಗಿಸಿಕೊಂಡಿದ್ದ ನಟೋರಿಯಸ್ ಮನೆಗಳ್ಳ ಈಗ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕಾಶ್ ಎಂಬ 54 ವರ್ಷದ ವ್ಯಕ್ತಿ ಇಲ್ಲಿಯವರೆಗೆ 160ಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ.
1978ರಲ್ಲಿ ಹತ್ತನೇ ತರಗತಿ ಇದ್ದಾಗಲೇ ಕಳ್ಳತನಕ್ಕೆ ಇಳಿದಿದ್ದ. ಬರೋಬ್ಬರಿ 40 ವರ್ಷಗಳಿಂದ ಕಳ್ಳತನವನ್ನೇ ತನ್ನ ಫುಲ್ ಟೈಂ ವೃತ್ತಿಯನ್ನಾಗಿಸಿಕೊಂಡಿದ್ದ. ರಾಜಾಜಿನಗರ ನಿವಾಸಿಯಾಗಿರುವ ಪ್ರಕಾಶ್, ಶಿವಮೊಗ್ಗ, ಬಳ್ಳಾರಿ, ಕೋಲಾರ ಮೂಲದವರನ್ನು ಮದುವೆಯಾಗಿದ್ದಾನೆ.
ಈತನಿಗೆ ಒಟ್ಟು ಮೂರು ಜನ ಪತ್ನಿಯರು ಏಳು ಜನ ಮಕ್ಕಳಿದ್ದಾರೆ. ಈತನ ಕುಟುಂಬವೇ ಕಳ್ಳರ ಕುಟುಂಬವಾಗಿದ್ದು ಸಹೋದರ ವರದರಾಜ್, ಮಕ್ಕಳಾದ ಬಾಲರಾಜ್, ಮಿಥುನ್ ಹಾಗು ಅಳಿಯ ಜಾನ್ ಎಲ್ಲರೂ ಕಳ್ಳತನಕ್ಕೆ ಸಾಥ್ ನೀಡುತ್ತಿದ್ದರು ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1978ರಿಂದ 1986 ರವರೆಗೆ ನೂರು ಬಾರಿ ಕಳ್ಳತನ ಮಾಡಿದ್ದಾನೆ. ಶೇಷಾದ್ರಿಪುರಂನಲ್ಲಿ ಚಿನ್ನದ ಅಂಗಡಿ, ಮಾರ್ಕೆಟ್ನಲ್ಲಿ ಸೇಟು ಅಂಗಡಿ ಬೀಗ ಮುರಿದು ನಾಲ್ಕು ಕೇಜಿ ಚಿನ್ನ ಕದ್ದಿದ್ದ. ಹಾಗೆಯೇ 1997ರಲ್ಲಿ ಗೋವಾದಲ್ಲಿ 7 ಕೇಜಿ ಚಿನ್ನಾಭರಣ ಎಗರಿಸಿದ್ದ.
ಇಲ್ಲಿಯವರೆಗೆ ಒಟ್ಟು 20 ಬಾರಿ ಜೈಲಿಗೆ ಹೋಗಿ ಬಂದಿದ್ದ. ಈಗ ಮತ್ತದೇ ಕಳ್ಳತನದ ಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆ ರಾಜಾಜಿನಗರ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 12 ಕೋಟಿ ರೂ ಮೌಲ್ಯದ ಮೊಬೈಲ್ ಕದ್ದ ದರೋಡೆಕೋರರು.. ಸಿನಿಮೀಯ ರೀತಿ ಚೇಸ್ ಮಾಡಿದ ಪೊಲೀಸರು