ಬೆಂಗಳೂರು: ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ.
ತವರು ಜಿಲ್ಲೆ ಶಿವಮೊಗ್ಗಕ್ಕೆ ತೆರಳುವ ಮುನ್ನ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಬಾಳಲ್ಲಿ ಸುಖ ಶಾಂತಿ ನೆಲಸಲಿ. ಕೊರೊನಾ ಮಹಾಮಾರಿ ಕಡಿಮೆ ಆಗಲಿ ಎಂದು ಆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸೋಣ. ಕೊರೊನಾ ನಿಯಮ ಪಾಲಿಸಿ ದಸರಾ ಹಬ್ಬ ಆಚರಿಸಿ ಎಂದು ನಾಡಿನ ಜನತೆಗೆ ಸಲಹೆ ನೀಡಿದರು.
ನಿನ್ನೆ ಮುಖ್ಯಮಂತ್ರಿ ಅವರು ಮಳೆಹಾನಿ ಪರಿಶೀಲನೆ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲಾ ಅಧಿಕಾರಿಗಳೂ ನಿನ್ನೆ ಇದ್ದರು. ಈಗಾಗಲೇ ನೆರೆ ಸಂತ್ರಸ್ತರಿಗೆ ಅಧಿಕಾರಿಗಳು ಚೆಕ್ ಕೊಡುತ್ತಿದ್ದಾರೆ ಎಂದರು.
ಮತ್ತೊಮ್ಮೆ ನೆರೆಹಾನಿ ಪರಿಶೀಲನೆ:
ನಿನ್ನೆ ಬೆಂಗಳೂರಿನಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೇನೆ. ನೀರು ನುಗ್ಗಿದವರ ಮನೆಗಳಿಗೆ 25 ಸಾವಿರ ರೂ. ಪರಿಹಾರ ನೀಡಿದ್ದೇವೆ. ಮಳೆ, ನೆರೆ ಪೀಡಿತ ಜಿಲ್ಲೆಗಳಿಗೂ ಭೇಟಿ ಕೊಟ್ಟಿದ್ದೇನೆ. ಅಗತ್ಯ ಬಿದ್ದರೆ ಮತ್ತೊಮ್ಮೆ ನೆರೆ ಪೀಡಿತ ಜಿಲ್ಲೆಗಳ ಪರಿಶೀಲನೆಗೆ ಹೋಗುತ್ತೇನೆ ಎಂದು ಸಿಎಂ ತಿಳಿಸಿದರು.
ಶಿರಾದಲ್ಲಿ ಮಾತ್ರ ಪ್ರಚಾರ: ಉಪಚುನಾವಣೆಯಲ್ಲಿ ಪ್ರಚಾರ ಮಾಡುವ ಕುರಿತು ಮಾತನಾಡಿದ ಬಿಎಸ್ವೈ, 30 ನೇ ತಾರೀಖಿನಂದು ಶಿರಾದಲ್ಲಿ ಒಂದು ದಿನ ಪ್ರಚಾರ ಮಾಡಿ ಬರುತ್ತೇನೆ ಎಂದು ತಿಳಿಸಿದರು.