ಬೆಂಗಳೂರು: ನಗರದ ಹೊರವಲಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಹಬ್ಬ ಮುಗಿಯವ ವೇಳೆ ನಗರದಲ್ಲಿ ಮತ್ತಷ್ಟು ಕೊರೊನಾ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತ ಹೇಳಿದ್ದಾರೆ.
ನಗರದ ಮಧ್ಯಭಾಗದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟ ತಲುಪಿ, ಈಗ ಇಳಿಕೆ ಪ್ರಮಾಣದಲ್ಲಿ ಇದೆ. ಐದು ಸಾವಿರದವರೆಗೆ ನಿತ್ಯ ಕಂಡುಬರುತ್ತಿದ್ದ ಕೊರೊನಾ ಪ್ರಕರಣಗಳು ಈಗ ಮೂರು ಸಾವಿರಕ್ಕಿಂತ ಕಡಿಮೆ ಬರುತ್ತಿದೆ. ಆದ್ರೆ ನಗರದ ಹೊರವಲಯಗಳಲ್ಲಿ ಕೊರೊನಾ ಏರಿಕೆ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಹೀಗಾಗಿ ಅಲ್ಲಿ ಹೆಚ್ಚು ಮಾರ್ಷಲ್ಸ್ ಅಳವಡಿಸಿ, ಜೊತೆಗೆ ಕೊರೊನಾ ಸೋಂಕು ಪರೀಕ್ಷೆ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಜನ ಸಾಮಾಜಿಕ ಅಂತರ, ಮಾಸ್ಕ್ ಹಾಕುವುದನ್ನು ಮರೆತರೆ ಹಬ್ಬ ಮುಗಿಯುವ ವೇಳೆಗೆ ಕೊರೊನಾ ಪ್ರಕರಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಸಿಸಿಸಿ ಕೇಂದ್ರಗಳನ್ನು ಪೂರ್ವ ವಲಯದ ಎರಡು ಕಡೆ ತೆರೆಯಲಾಗಿದೆ. ಬೇಡಿಕೆ ಕಂಡು ಬಂದರೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದು ತಿಳಿಸಿದರು.
ಮಳೆ ಅನಾಹುತ ತಡೆಗೆ ಕ್ರಮ...
ಬೆಂಗಳೂರು ನಗರ 800 ಚ.ಕಿ.ಮೀ ಇದೆ. ನಿನ್ನೆಯಿಂದ ಎಲ್ಲೆಲ್ಲಿ ಮಳೆ ಹಾನಿ ಆಗಿದೆ ಅಲ್ಲೆಲ್ಲಾ ಭೇಟಿ ನೀಡಿ, ಸಮಸ್ಯೆಗೆ ಪರಿಹಾರ ಕಲ್ಪಿಸಲಾಗ್ತಿದೆ. ಪಾಲಿಕೆಯ ರೆವೆನ್ಯೂ ಲೇಔಟ್ಗಳಲ್ಲಿ ಇನ್ನೂ ಮೂಲ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಸಮಸ್ಯೆ ಉಂಟಾಗ್ತಿದೆ. ಕೆಲವು ಕಡೆ ರಾಜ ಕಾಲುವೆ ದಂಡೆಯ ಮೇಲೆಯೇ ಮನೆ ಕಟ್ಟಲಾಗಿದೆ. ಹೀಗಾಗಿ ಬಫರ್ ಜೋನ್ನಲ್ಲಿ ಮನೆ ಕಟ್ಟಲಾಗಿದ್ದರೆ, ಒತ್ತುವರಿಯಾಗಿದ್ದರೆ ತೆರವು ಮಾಡಲಾಗುತ್ತದೆ ಎಂದರು.
ಇಂದಿರಾ ಕ್ಯಾಂಟೀನ್ಗೆ ಅನುದಾನ ನೀಡಲು ಸರ್ಕಾರ ಹಿಂದೇಟು!
ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದು ಹಾಗೂ ನಿರ್ವಹಣೆಯನ್ನು ರಾಜ್ಯ ಸರ್ಕಾರದ ಅನುದಾನದಲ್ಲೇ ನಡೆಸಲಾಗ್ತಿತ್ತು. ಆದರೆ, ನಂತರದ ದಿನಗಳಲ್ಲಿ ಸರ್ಕಾರದ ಅನುದಾನ ಬಾರದೇ ಇದ್ದಾಗ ಪಾಲಿಕೆಯ ಅನುದಾನದಲ್ಲಿ ನಡೆಸಲಾಗ್ತಿತ್ತು. ಆದರೆ, ಕೋವಿಡ್ ಹಿನ್ನಲೆ ಪಾಲಿಕೆಗೆ ಆರ್ಥಿಕ ನಷ್ಟ ಆಗಿರುವುದರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದ್ರೆ ಸರ್ಕಾರದಿಂದಲೂ ಹಣ ಬಾರದ ಕಾರಣ, ಬಿಬಿಎಂಪಿ ಗುತ್ತಿಗೆದಾರರ ಸಂಪೂರ್ಣ ಪಾವತಿ ಮಾಡಲು ಸಾಧ್ಯವಾಗ್ತಿಲ್ಲ. ಅರ್ಧ ಪ್ರಮಾಣ ಮಾತ್ರ ಬಿಡುಗಡೆ ಮಾಡಲಾಗ್ತಿದೆ. ಮತ್ತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.