ಬೆಂಗಳೂರು: ನೇರಾ ಹಣಾಹಣಿಯಿಂದ ಕೂಡಿರುವ ಒಂದು ಲೋಕಸಭೆ ಸೇರಿ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಒಳ ಏಟಿನ ಭೀತಿ ಎದುರಾಗಿದೆ.
ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 17 ರಂದು ಉಪಚುನಾವಣೆ ನಡೆಯಲಿದ್ದು, ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಹಾಗಾಗಿ, ಅಭ್ಯರ್ಥಿಗಳ ಗೆಲುವಿಗೆ ಮುಳುವಾಗಲಿದೆಯೇ ಎಂಬ ಆತಂಕ ಕಾಡುತ್ತಿದೆ.
ಮೂರು ಕ್ಷೇತ್ರಗಳ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ರಣಬಿಸಿಲು ಹೊಡೆತ ಒಂದೆಡೆಯಾದರೆ, ಮತ್ತೊಂದೆಡೆ ಪ್ರತಿಪಕ್ಷಗಳ ಸವಾಲಿಗಿಂತ ಹೆಚ್ಚಾಗಿ ಪಕ್ಷದೊಳಗೆ ಎದ್ದಿರುವ ಅಸಮಾಧಾನದ ಹೊಗೆ ಆರಿಸುವುದೇ ದೊಡ್ಡ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಚಾರಕ್ಕೆ ಇಳಿಯದ ಮುಖಂಡರು: ಬೆಳಗಾವಿಯಲ್ಲಿ ಕೇಂದ್ರ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರ ಪತ್ನಿಗೆ ಟಿಕೆಟ್ ನೀಡಿದ್ದು, ಬಹುತೇಕ ಎಲ್ಲ ರಾಜ್ಯಮಟ್ಟದ ಸಚಿವರು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಈ ಸೀಟಿನ ಮೇಲೆ ಕಣ್ಣಿಟ್ಟಿದ್ದ ಮತ್ತು ಟಿಕೆಟ್ ಸಿಗುವ ಬಗ್ಗೆ ಖಚಿತತೆ ಇದ್ದ ಆಕಾಂಕ್ಷಿಗಳೂ ಸೇರಿದಂತೆ ದೊಡ್ಡ ಸಂಖ್ಯೆಯ ಸ್ಥಳೀಯ ಮುಖಂಡರು ನೇರವಾಗಿ ಪ್ರಚಾರಕ್ಕೆ ಇಳಿಯದಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿ ಸರ್ಕಾರ ರಚನೆಗೆ ನೆರವಾಗಿದ್ದ ಪ್ರತಾಪ್ ಗೌಡ ಪಾಟೀಲರಿಗೆ ಮಸ್ಕಿಯಲ್ಲಿ ಮಣೆ ಹಾಕಲಾಗಿದೆ. ಆದರೆ, ಬಿಜೆಪಿ ಜೊತೆ ಬೆರೆಯುವಲ್ಲಿ ಅವರು ಅಷ್ಟಾಗಿ ಆಸಕ್ತಿ ತೋರದಿರುವುದು ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ. ಇನ್ನು ಅಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ಇದೆ. ಅದೇ ರೀತಿ ಬಸವಕಲ್ಯಾಣದಲ್ಲಿ ಘೋಷಿತ ಅಭ್ಯರ್ಥಿ ವಿರುದ್ಧ ಅಲ್ಲಿನ ಸ್ಥಳೀಯ ಮುಖಂಡರೇ ಒಟ್ಟಾಗಿ ವಿರೋಧ ವ್ಯಕ್ತಪಡಿಸಿರುವುದು ಬಿಜೆಪಿಯ ಗೆಲುವಿನ ಹಾದಿಯನ್ನು ಮುಳ್ಳಾಗಿಸಿದೆ.
ಭಾರಿ ಸಂಚಲನ ಮೂಡಿಸುತ್ತಿದೆ ಯತ್ನಾಳ್ ಹೇಳಿಕೆ: ಈ ಬೆಳವಣಿಗೆಗಳ ನಡುವೆಯೇ ಬೆಳಗಾವಿ ಉಪ ಚುನಾವಣೆಯಲ್ಲಿ ಪಂಚಮಸಾಲಿ ಮೀಸಲು ಹೋರಾಟದ ಕಾವು ನಿರ್ಣಾಯಕ ಪಾತ್ರ ವಹಿಸುವ ಸೂಚನೆಗಳು ಕಂಡು ಬರುತ್ತಿವೆ. ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆದಿರುವ ಮತ್ತು ಮೀಸಲಾತಿಗೆ ಪಟ್ಟುಹಿಡಿದಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಇತ್ತೀಚಿನ ಹೇಳಿಕೆಗಳು ಭಾರಿ ಸಂಚಲನ ಮತ್ತು ಕುತೂಹಲ ಮೂಡಿಸಿವೆ.
2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಧಾರ್ಮಿಕ ಮುಖಂಡರು ಕಳೆದ ತಿಂಗಳಷ್ಟೇ ತೀವ್ರ ಸ್ವರೂಪದ ಚಳವಳಿ ನಡೆಸಿದ್ದರು. ಸರ್ಕಾರ ಈ ವಿಚಾರವನ್ನು ಹಿಂದುಳಿದ ಆಯೋಗದ ಹೆಗಲಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ. ಈ ಬೆಳವಣಿಯ ಹಿನ್ನೆಲೆ ಬಿಜೆಪಿ ಸರ್ಕಾರದ ಮೇಲೆ ಪಂಚಮಸಾಲಿ ಸಮುದಾಯ ಅಸಮಾಧಾನಗೊಂಡಿದೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆದಲ್ಲಿ ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸುಲಭದ ಮಾತಲ್ಲ. ಬೆಳಗಾವಿಯ ಒಟ್ಟು ಮತದಾರರ ಶೇ.25 ಹಾಗೂ ಲಿಂಗಾಯತ ಮತಗಳ ಪೈಕಿ ಶೇ.75ರಷ್ಟು ಮತದಾರರು ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ಅವರ ಆಯ್ಕೆ ಫಲಿತಾಂಶದ ಮೇಲೆ ಖಚಿತ ಪರಿಣಾಮ ಬೀರುವ ಸಾಧ್ಯತೆ ಇದೆ.
ಬಿಎಸ್ವೈಯಿಂದ ಮನವೊಲಿಸುವ ನಿರೀಕ್ಷೆ: ಕಳೆದೆರಡು ದಶಕಗಳಿಂದಲೂ ಪಂಚಮಸಾಲಿ ಮತಗಳು ಬಿಜೆಪಿಯ ಬುಟ್ಟಿಯಲ್ಲಿ ಸುರಕ್ಷಿತವಾಗಿದ್ದವು. ಆದರೆ, ಈ ಬಾರಿ ಸಮುದಾಯ ಬಿಜೆಪಿಯ ಕೈಹಿಡಿಯುವ ಖಚಿತತೆ ಪಕ್ಷದ ಮುಖಂಡರಿಗೇ ಇದ್ದಂತೆ ಕಾಣುತ್ತಿಲ್ಲ. ಈ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಯಾವುದೇ ಕಾರಣಕ್ಕೂ ಕೈ ಸುಟ್ಟುಕೊಳ್ಳಲು ಇಚ್ಛಿಸುವುದಿಲ್ಲ. ಹಾಗಾಗಿಯೇ ಖುದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ಪಂಚಮಸಾಲಿ ಮುಖಂಡರ ಸಭೆ ನಡೆಸಿ ಅವರ ಮನವೊಲಿಸುವ ಕಾರ್ಯ ನಡೆಸುವ ನಿರೀಕ್ಷೆ ಇದೆ.
ಮರಾಠಿ ಮತಗಳು ವಿಭಜನೆಗೊಂಡು ಪಂಚಮಸಾಲಿ ಮತಗಳೂ ಕಾಂಗ್ರೆಸ್‍ನತ್ತ ವಾಲಿದರೆ ಬಿಜೆಪಿಗೆ ಸೋಲಾಗಬಹುದು ಎಂಬ ಲೆಕ್ಕಾಚಾರ ಸ್ಥಳೀಯ ಮಟ್ಟದಲ್ಲಿ ಇದೆ. ಇದಕ್ಕೆಲ್ಲಾ ಮೇ 2 ರಂದು ನಡೆಯುವ ಚುನಾವಣಾ ಫಲಿತಾಂಶದಲ್ಲಿ ಉತ್ತರ ಸಿಗಲಿದೆ.
ಅಬ್ಬರದ ಪ್ರಚಾರ: ಕಾಂಗ್ರೆಸ್ ನಾಯಕರು ಸಹ ನಾವೇನು ಕಡಿಮೆ ಎಂಬಂತೆ ಮೂರು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ. ಪಾಟೀಲ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ.
ಬಸವಕಲ್ಯಾಣ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ಸಹ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಸೆಡ್ಡು ಹೊಡೆದು ಪ್ರಚಾರ ನಡೆಸುತ್ತಿದೆ. ಎರಡು ದಿನಗಳಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಸವಕಲ್ಯಾಣ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದು, ಇತರ ನಾಯಕರ ಜೊತೆ ಸೇರಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.
ಒಟ್ಟಾರೆ, ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳು ಹಾಗೂ ಬಿಜೆಪಿ ತೆಕ್ಕೆಯಲ್ಲಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಯಾರ ಪಾಲಾಗುತ್ತದೆ ಎಂಬುದನ್ನು ತಿಳಿಯಲು ಚುನಾವಣಾ ಫಲಿತಾಂಶದವರೆಗೂ ಕಾಯಲೇಬೇಕಾಗಿದೆ.
ಓದಿ: ರಾಜ್ಯದ 8 ನಗರಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ: ಸಂಜೆ ಮಾರ್ಗಸೂಚಿ ಬಿಡುಗಡೆ