ಬೆಂಗಳೂರು: ಸೋಲಿನಿಂದ ನಾವು ಧೃತಿಗೆಡಬೇಕಿಲ್ಲ, ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಈ ಕಾಂಗ್ರೆಸ್ ಸರ್ಕಾರದ ಭವಿಷ್ಯ ನಿಂತಿದೆ. ಈ ಸರಕಾರ ಇರಬಹುದು ಅಥವಾ ಹೋಗಬಹುದು. ಏನು ಬೇಕಾದರೂ ಆಗಬಹುದು. ಸುಳ್ಳು ಗ್ಯಾರಂಟಿಗಳು ಹಾಗೂ ಕೂಪನ್ ಗಳನ್ನು ಕೊಟ್ಟು ಜನರಿಗೆ ವಂಚಿಸಿ ಕಾಂಗ್ರೆಸ್ ಕುತಂತ್ರದಿಂದ ಗೆದ್ದಿದೆ ಎಂದು ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿದ ಪ್ರಯುಕ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸಮ್ಮುಖದಲ್ಲಿ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಗ್ಯಾರಂಟಿಗಳನ್ನೇ ನಾವು ಜನರ ಮುಂದೆ ಇಡಬೇಕು. ನುಡಿದಂತೆ ನಡೆಯದ ಕಾಂಗ್ರೆಸ್ ವಿರುದ್ಧ ಆಂದೋಲನವನ್ನೇ ಮಾಡಬೇಕು. ಜನರ ಜತೆ ನಿಲ್ಲಬೇಕು. ಜನರನ್ನು ಆಂದೋಲನಕ್ಕೆ ಧುಮುಕುವಂತೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಸಲಹೆ ನೀಡಿದರು.
ಅಭ್ಯರ್ಥಿಗಳಿಗೆ ನೆರವು ಕೊಡಲು ಸಾಧ್ಯ ಆಗಲಿಲ್ಲ: ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ರಾಜಿ ಇಲ್ಲದೇ ಕೆಲಸ ಮಾಡುವೆ ಎಂದು ಘೋಷಣೆ ಮಾಡಿದರು. ಗೆದ್ದರೆ ನಾವು ಗೆಲುವಿನ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಸೋತರೆ ಕಾರಣಗಳನ್ನು ಹುಡುಕಬೇಕಾಗುತ್ತದೆ. ನಾನು ಹುಡುಕುತ್ತಿದ್ದೇನೆ. ಆ ಕಾರಣಗಳೇನು ಎನ್ನುವುದು ನನಗೆ ಗೊತ್ತಿದೆ, ಕೊನೆ ಕ್ಷಣದಲ್ಲಿ ನಾನು ನನ್ನ ಅಭ್ಯರ್ಥಿಗಳಿಗೆ ನಿರೀಕ್ಷಿತ ಆರ್ಥಿಕ ನೆರವು ಕೊಡಲಾಗಲಿಲ್ಲ. ಅಂತಿಮ ಕ್ಷಣದಲ್ಲಿ ನನ್ನ ಪಕ್ಷಗಳ ಅಭ್ಯರ್ಥಿಗಳಿಗೆ ನೆರವು ಕೊಡುವುದು ಕಷ್ಟವಾಯಿತು. ನಿಮ್ಮ ಸಹಾಯಕ್ಕೆ ನಿಲ್ಲದೆ ಹೋದ ಕಾರಣಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಸೋತ ಅಭ್ಯರ್ಥಿಗಳಿಗೆ ಕ್ಷಮೆ ಕೇಳಿದರು.
ಸುಳ್ಳು ಗ್ಯಾರೆಂಟಿ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ: ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿತು. ಸುಳ್ಳು ಗ್ಯಾರಂಟಿಗಳು ಹಾಗೂ ಕೂಪನ್ ಗಳನ್ನು ಕೊಟ್ಟು ಜನರಿಗೆ ವಂಚಿಸಿ ಅಧಿಕಾರಕ್ಕೆ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಕುತಂತ್ರಗಾರಿಕೆ ಮಾಡಿದರು. ಅವರ ಪಕ್ಷದವರು ಒಂದು ಸಮುದಾಯವನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿದರು ಎಂದು ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹೇರಳವಾಗಿ ಹಣ ವೆಚ್ಚ ಮಾಡಿದವು. ಆಮಿಷಗಳನ್ನು ಒಡ್ಡಿದವು. ಅವುಗಳಿಗೆ ಪೈಪೋಟಿ ಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅಂತಹ ಕೆಲಸ ಮಾಡಲು ಹೋಗಲಿಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ಯಾರನ್ನೂ ನಾವು ಟೀಕೆ ಮಾಡಲಿಲ್ಲ. ತೇಜೋವಧೆ ಮಾಡಲಿಲ್ಲ. ಅಭಿವೃದ್ಧಿ ವಿಷಯ ಇಟ್ಟುಕೊಂಡು ಹೋದೆವು. ಅದಕ್ಕಾಗಿ ನಾವು ಸೋಲಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಿಂದ ನಲುಗಿದ ಒಂದು ಸಮಾಜದ ಪರವಾಗಿ ನಾವು ದನಿ ಎತ್ತಿದೆವು, ಅಚಲವಾಗಿ ಬೆಂಬಲ ಕೊಟ್ಟೆವು, ಹೆಜ್ಜೆ ಹೆಜ್ಜೆಗೂ ಅವರಿಗೆ ಬಿಜೆಪಿ ಸರಕಾರ ತೊಂದರೆ ಕೊಟ್ಟಾಗ ಧೈರ್ಯವಾಗಿ ನಿಂತೆವು. ಆದರೆ ಅವರು ನಮ್ಮ ಪಕ್ಷದ ಪರವಾಗಿ ನಿಲ್ಲದೇ ಹೋದರು ಎಂದು ಕುಮಾರಸ್ವಾಮಿ ನೊಂದು ನುಡಿದರು.
ಅಭ್ಯರ್ಥಿಗಳಿಗೆ ಖರ್ಚು ಮಾಡಲು ಆಗಲಿಲ್ಲ:ಆರ್ಥಿಕ ಸಮಸ್ಯೆಗಳು ನಮ್ಮ ಸೋಲಿಗೆ ಕಾರಣ, ಅಭ್ಯರ್ಥಿಗಳ ಖರ್ಚಿಗೆ ನಾವು ಹಣ ಕೊಡಲಿಲ್ಲ. ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಸರಿ ಸಮವಾಗಿ ಖರ್ಚು ಮಾಡಲು ನಮ್ಮಿಂದ ಆಗಲಿಲ್ಲ. ಕೇವಲ 600 ಮತಗಳಲ್ಲಿ ಸೋತ ಕುಮಟಾ ಕ್ಷೇತ್ರದ ಸೂರಜ್ ನಾಯಕ್ ಸೋನಿ ಅವರ ಸೋಲು ನನಗೆ ಅತೀವ ನೋವು ಉಂಟು ಮಾಡಿದೆ.
ಫಲಿತಾಂಶದಿಂದ ಧೃತಿಗೆಡಬೇಕಿಲಿಲ್ಲ. 1989ರಲ್ಲಿ ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಸೋತಿದ್ದರು. ಆ ನಂತರ ಐದು ವರ್ಷಗಳಲ್ಲಿ ದೇವೇಗೌಡರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ರಾಜ್ಯ ಸರಕಾರ ಬಂದು ಅವರು ಮುಖ್ಯಮಂತ್ರಿ ಆಗಿ, ಆ ನಂತರ ಪ್ರಧಾನಿಯೂ ಆದರು. ಇಂಥ ಸೋಲು ಶಾಶ್ವತ ಅಲ್ಲ, ಹಾಗಂತ ಮೈಮರೆಯಬೇಡಿ ಎಂದು ಮುಖಂಡರಿಗೆ ತಾಕೀತು ಮಾಡಿದರು.
ಲೋಕಸಭೆ ಚುನಾವಣೆ ನಂತರ ಏನು ಬೇಕಾದರೂ ಆಗಬಹುದು: ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಈ ಸರಕಾರದ ಭವಿಷ್ಯ ನಿಂತಿದೆ. ಈ ಸರಕಾರ ಇರಬಹುದು ಅಥವಾ ಹೋಗಬಹುದು. ನಾನೇನು ಭವಿಷ್ಯ ಹೇಳುತ್ತಿಲ್ಲ, ಆ ನಂತರ ಏನೆಲ್ಲಾ ಬೆಳೆವಣಿಗೆ ನಡೆಯುತ್ತಿದೆಯೋ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ 135 ಕ್ಷೇತ್ರ ಗೆದ್ದಿದೆ, ಆದರೆ ಆ ಸರಕಾರದಲ್ಲಿ ವಿಶ್ವಾಸದ ಕೊರತೆ ಇದೆ. ಜನರ ಕೆಲಸ ಮಾಡಲು ಅವರಿಗೆ ಆಗುತ್ತಿಲ್ಲ. ಆದರೆ ನಾವು ಸಂಘಟನೆ ಕಡೆ ಗಮನಕ್ಕೆ ಕೊಡೋಣ, ವಿಷಯಾಧಾರಿತವಾಗಿ ನಾವು ಹೋರಾಟ ನಡೆಸಬೇಕು. ಸಂಘಟನೆಯನ್ನು ಬಳಪಡಿಸಿಕೊಂಡು ಜನರ ಜತೆ ನಿಲ್ಲೋಣ ಎಂದು ಅವರು ಹೇಳಿದರು.
ಜಿಲ್ಲಾಧ್ಯಕ್ಷರಿಗೆ ಚಳಿ ಬಿಡಿಸಿದ ಮಾಜಿ ಸಿಎಂ: ಸಮರ್ಥ ಅಭ್ಯರ್ಥಿಗಳನ್ನು ತಯಾರು ಮಾಡುವಲ್ಲಿ, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಲೋಪ ಎಸಗಿರುವ ಪಕ್ಷದ ಜಿಲ್ಲಾ ಅಧ್ಯಕ್ಷರುಗಳನ್ನು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷಗಿರಿ ಎಂದರೆ ಸ್ವಂತ ಜಹಗೀರು ಅಲ್ಲ. ಸಂಘಟನೆಯನ್ನು ಸರಿಯಾಗಿ ಮಾಡಿಲ್ಲ. ಯಾರೂ ಸಮರ್ಥವಾಗಿ ಕೆಲಸ ಮಾಡಿಲ್ಲ, ಎಲ್ಲ ಹಂತಗಳಲ್ಲಿಯೂ ಸಂಘಟನೆ ಸೋತಿದೆ. ನಾನೇ ಅಭ್ಯರ್ಥಿ ಹುಡುಕಿ ಕೊಡಬೇಕಾದ ಪರಿಸ್ಥಿತಿ ಬಂದಿದೆ, ಹಾಗಾದರೆ ಜಿಲ್ಲಾಧ್ಯಕ್ಷರು ಮಾಡಿದ್ದೇನು? ಇವರೇನು ಅಲಂಕಾರಕ್ಕೆ ಇದ್ದಾರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿಗಳ ಬಗ್ಗೆ ದನಿ ಎತ್ತಿ:ನಾವು ಹಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ. ರಾಜಕೀಯ ಮಾಡಲಾಗದು. ಜನರ ಮನಸ್ಸು ಗೆದ್ದು ರಾಜಕಾರಣ ಮಾಡಬೇಕು. ಈಗ ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸರಕಾರ ಈಗ ಷರತ್ತು ಅನ್ವಯ ಅನ್ನುತ್ತಿದೆ. ನಂಗೂ ಫ್ರೀ ನಿಂಗೂ ಫ್ರೀ ಎಂದವರು ಈಗ ಕಂಡಿಷನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇನು, ಡಿಕೆಶಿ ಹೇಳಿದ್ದೇನು? ಖರ್ಗೆ ಹೇಳಿದ್ದೇನು? ಇದನ್ನೇ ನಾವು ಜನರ ಮುಂದೆ ಇಡಬೇಕು ಎಂದರು.
ಕೆಲ ಅಭ್ಯರ್ಥಿಗಳಿಗೆ ಚಾಟಿ:ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಕಳೆದ ಹಲವು ವರ್ಷಗಳಿಂದ ರಾಜಧಾನಿಯಲ್ಲಿ ಪಕ್ಷದ ಸಂಘಟನೆ ನನೆಗುದಿಗೆ ಬಿದ್ದಿದೆ. ಚುನಾವಣೆ ಹತ್ತಿರಕ್ಕೆ ಬಂದಾಗ ಬಂದು ಗೋಳಾಡಿ ಬೀ ಫಾರಂ ತೆಗೆದುಕೊಂಡು ಹೋಗುತ್ತೀರಿ, ಆಮೇಲೆ ಯಾವನೋ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತೀರಿ ಎಂದು ಖಾರವಾಗಿ ಚಾಟಿ ಬೀಸಿದರು.
ಇನ್ನು ಮುಂದೆ ಬೆಂಗಳೂರಿನಲ್ಲಿ ಸಂಘಟನೆ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ. ನಗರದ ನಾಲ್ಕು ವಿಭಾಗಕ್ಕೆ ನಾಲ್ವರು ಅಧ್ಯಕ್ಷರನ್ನು ಮಾಡಿ ಆದೇಶ ಹೊರಡಿಸಿ ವೇದಿಕೆಯ ಮೇಲೆ ಕೂತಿದ್ದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಸೂಚನೆ ನೀಡಿದ ಮಾಜಿ ಸಿಎಂ ಎಚ್ಡಿಕೆ, ಒಬ್ಬರಿಗೆ ಕೊಟ್ಟರೆ ಅವರು ಏಕ ಚಕ್ರಾಧಿಪತ್ಯ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಎಲ್ಲ ನೂತನ ಶಾಸಕರು, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.
ಇದನ್ನೂಓದಿ:ಜನ ನಿಮ್ಮ ಮುಖ ನೋಡಿ ಮತ ಹಾಕಿಲ್ಲ, ಗ್ಯಾರಂಟಿ ಕಾರ್ಡ್ ನೋಡಿ ವೋಟ್ ಕೊಟ್ಟಿದ್ದಾರೆ : ಪ್ರತಾಪ್ ಸಿಂಹ