ಬೆಂಗಳೂರು: ನಿನ್ನೆಯಿಂದ ಪ್ರಾರಂಭವಾದ ರೈತರ ಹೋರಾಟ ಇಂದೂ ಕೂಡ ಮುಂದುವರೆದಿದೆ. ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿಯ ವಿರುದ್ಧ ರೈತರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.
‘ಐಕ್ಯ ಹೋರಾಟ’ ಹೆಸರಿನ ಪ್ರತಿಭಟನೆಯನ್ನು ಸೆ. 30ರ ವರೆಗೂ ಮುಂದುವರೆಸಲು ತೀರ್ಮಾನಿಸಲಾಗಿದ್ದು, ನಿನ್ನೆ ಹೋರಾಟಕ್ಕೆ ಆಗಮಿಸಿದ್ದ ರೈತರು ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಈ ಪ್ರತಿಭಟನೆಗೆ ರಾಷ್ಟ್ರೀಯ ನಾಯಕರ ಬೆಂಬಲ ಸಿಕ್ಕಿದ್ದು, ನಿನ್ನೆ ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಯೋಗೇಂದ್ರ ಯಾದವ್ ಸೇರಿದಂತೆ ಹಲವು ಗಣ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದಲ್ಲದೆ ಸೆ.25ಕ್ಕೆ ವಿವಿಧ ರೈತ ಸಂಘಗಳು ಭಾರತ್ ಬಂದ್ಗೆ ಕರೆ ಕೊಟ್ಟಿದ್ದು, ಇಂದು ರಾಜ್ಯದಲ್ಲಿ ಸಾಂಕೇತಿಕವಾಗಿ ಜಿಲ್ಲಾ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.