ಬೆಂಗಳೂರು: ಫ್ರೀಡಂ ಪಾರ್ಕ್ನಲ್ಲಿ ವಿವಿಧ ಸಂಘಟನೆಗಳು ರೈತರನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದವು. ಆದರೆ, ರೈತ ಬ್ರಿಗೇಡ್ ಕಾರ್ಯಕರ್ತರು ಪ್ರತಿಭಟನಾ ಸ್ಥಳವನ್ನು ಸ್ವಚ್ಚಗೊಳಿಸುವ ಕೆಲಸ ಮಾಡಿ ಗಮನ ಸೆಳೆದರು.
ನಿನ್ನೆ ಸಾವಿರಾರು ಸಂಖ್ಯೆಯಲ್ಲಿ ರೈತರು, ಹೋರಾಟಗಾರರು ಫ್ರೀಡಂ ಪಾರ್ಕ್ಗೆ ಆಗಮಿಸಿದ್ದರು. ಬಂದಿದ್ದ ಎಲ್ಲರಿಗೂ ಕೆಲ ಸ್ವಯಂ ಸೇವಾ ಸಂಸ್ಥೆಗಳು ಉಪಹಾರ, ನೀರನ್ನು ಉಚಿತವಾಗಿ ವಿತರಿಸಿದ್ದವು. ಈ ವೇಳೆ, ಆಹಾರ ಸೇವನೆಯ ನಂತರ ಪೊಟ್ಟಣ, ನೀರಿನ ಬಾಟಲ್ಗಳನ್ನು ಎಲ್ಲೆಂದರಲ್ಲಿ ಎಸೆದು ಫ್ರೀಡಂ ಪಾರ್ಕ್ ಆವರಣವನ್ನು ತಿಪ್ಪೆ ಗುಂಡಿಯನ್ನಾಗಿ ಮಾಡಿದ್ದರು.
ಈ ವೇಳೆ, ರೈತ ಬ್ರಿಗೇಡ್ ಕಾರ್ಯಕರ್ತರು ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಹೋರಾಟಕ್ಕೆ ಕೈ ಜೋಡಿಸುವುದರ ಜೊತೆಗೆ ಫ್ರೀಡಂ ಪಾರ್ಕ್ ಅನ್ನು ಸ್ವಚ್ಚಗೊಳಿಸಿ ಗಮನ ಸೆಳೆದರು. ಸಣ್ಣ ತಂಡವಾದರೂ ಎಲ್ಲಾ ಕಡೆ ಆಹಾರದ ಪೊಟ್ಟಣ, ನೀರಿನ ಬಾಟಲಿ, ಪ್ಲಾಸ್ಟಿಕ್ ಇತ್ಯಾದಿ ಎಲ್ಲಾ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.
ಓದಿ: ಡಿನೋಟಿಫಿಕೇಷನ್ ಪ್ರಕರಣ: 'ಸುಪ್ರೀಂ'ನಲ್ಲಿಂದು ಸಿಎಂ ಬಿಎಸ್ವೈ ಮೇಲ್ಮನವಿ ವಿಚಾರಣೆ
ಈ ಕುರಿತು ಮಾತನಾಡಿದ ರೈತ ಬ್ರಿಗೇಡ್ ಸದಸ್ಯೆ ಅಪರ್ಣಾ, ನಾವಿಲ್ಲಿ ರಾಷ್ಟ್ರ ವಿರೋಧಿಗಳಾಗಿ ಬಂದಿಲ್ಲ. ರೈತರ ಪ್ರತಿಭಟನೆ ಬೆಂಬಲಿಸಲು ಬಂದಿದ್ದೇವೆ. ಬಂದಿರುವ ಜನರು ಆಹಾರದ ಪೊಟ್ಟಣ ಇತ್ಯಾದಿಗಳನ್ನು ಎಸೆದಿದ್ದಾರೆ. ಅದೆಲ್ಲವನ್ನೂ ಸ್ವಚ್ಛ ಮಾಡುತ್ತಿದ್ದೇವೆ. ನಾವು ಮಾಡುತ್ತಿರುವುದು ದೊಡ್ಡ ಕೆಲಸವೇನಲ್ಲ ಎಂದು ತಮ್ಮ ಸೇವಾ ಕಾರ್ಯಕ್ಕಿಂತ ರೈತರ ಹೋರಾಟ ದೊಡ್ಡದು ಎಂದರು.