ಬೆಂಗಳೂರು: ಸೋಮವಾರ 27 ರಂದು ಭಾರತ ಬಂದ್ ಕಾರ್ಯಕ್ರಮವನ್ನು, ಕರ್ನಾಟಕದಲ್ಲಿಯೂ ಸಂಪೂರ್ಣವಾಗಿ ಈ ಬಂದ್ ಯಶಸ್ವಿ ಮಾಡಲು ಪೂರ್ವ ತಯಾರಿ ನಡೆಯುತ್ತಿದೆ. ರೈತ ಸಂಘಟನೆಗಳು ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಸಂಘಟನೆ, ದಲಿತ ಸಂಘರ್ಷ ಸಮಿತಿ ಹಾಗೆಯೇ ಕರ್ನಾಟಕದ ಕನ್ನಡಪರ ಸಂಘಟನೆಗಳಾದ ನಾರಾಯಣಗೌಡ ಬಣ, ವಾಟಾಳ್ ನಾಗರಾಜ್, ಶಿವರಾಮೇಗೌಡ, ಪ್ರಮೀಣ್ ಕುಮಾರ್ ಶೆಟ್ಟಿ ಬಣ, ಎಲ್ಲರೂ ಒಟ್ಟಾಗಿ ಭಾರತ್ ಬಂದ್ ಯಶಸ್ವಿಗೊಳಿಸಲು ಕೈಜೋಡಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನಲ್ಲಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಲಾರಿ, ಬಸ್ ಮಾಲೀಕರ ಸಂಘಟನೆಗಳೂ ಹಾಗೂ ಎಲ್ಲ ಮಾರುಕಟ್ಟೆಗಳು, ವಾಣಿಜ್ಯ ಸಂಕೀರ್ಣಗಳಿಗೂ ಬಂದ್ ಯಶಸ್ವಿ ಮಾಡಲು ಕೈಜೋಡಿಸುವಂತೆಮನವಿ ಮಾಡಲಾಗಿದೆ ಎಂದರು.
ಬಂದ್ ಕಾರ್ಯಕ್ರಮಗಳು :
- ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಟೌನ್ ಹಾಲ್ ನಿಂದ ಮೈಸೂರ್ ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಇಲ್ಲಿಯೇ ಸಭೆ ಮುಕ್ತಾಯವಾಗಲಿದೆ.
- ಈ ಬಂದ್ ಪ್ರತೀ ಜಿಲ್ಲಾ, ತಾಲೂಕು, ಗ್ರಾಮ, ಹಳ್ಳಿ ವ್ಯಾಪ್ತಿಯಲ್ಲೂ ಪ್ರತಿಭಟನೆ ನಡೆಯಲಿದೆ.
- ಹೆದ್ದಾರಿ ಬಂದ್ ಆಗಲಿದೆ. ರೈಲು ತಡೆ ಚಳವಳಿಯೂ ಇದರ ಭಾಗವಾಗಲಿದೆ.
- ಎಲ್ಲ ನಾಗರಿಕರೂ ಬಂದ್ಗೆ ಸ್ಪಂದಿಸುವಂತೆ ಮನವಿ.
ಇದು ಕೇವಲ ಮೂರು ಕೃಷಿ ಕಾಯ್ದೆಯ ವಿಷಯ, ರೈತರ ಸಮಸ್ಯೆ ಎಂದು ಭಾವಿಸಬಾರದು. ಇದು ಕೇವಲ ರೈತರಿಗೆ ಮರಣ ಶಾಸನ ಅಲ್ಲ, ಎಲ್ಲ ನಾಗರಿಕರಿಗೂ ಮರಣ ಶಾಸನ ಆಗುತ್ತಿದೆ. ಕೇವಲ ಕೃಷಿ ಕ್ಷೇತ್ರದ ಕಂಪನೀಕರಣ ಅಷ್ಟೇ ಅಲ್ಲದೆ ಈಗಾಗಲೇ ವಿಮಾನ ನಿಲ್ದಾಣ, ಬಂದರು, ಹೆದ್ದಾರಿಗಳನ್ನು ಕಾರ್ಪೊರೇಟ್ ವಲಯದ ಭಾಗವಾಗಿ ಮಾಡಲಾಗ್ತಿದೆ. ಸರ್ಕಾರದಿಂದ ಕೈತಪ್ಪಿ ಕಂಪನಿಗಳ ಕೈಗೆ ಎಲ್ಲವೂ ಹೋಗಲಿದೆ.
ಈಗಾಗಲೇ ರಾಜ್ಯದಲ್ಲಿ ಕೃಷಿ ಮಾರುಕಟ್ಟೆ ಶೇ.80 ಭಾಗ ಬಂದ್ ಆಗಿದೆ. ಕೃಷಿ ಉತ್ಪನ್ನಗಳು ಕೃಷಿ ಮಾರುಕಟ್ಟೆಗೆ ಬಾರದೇ ಹೊರಗಡೆಯಿಂದಲೇ ನಡೆಯುತ್ತಿದೆ. ಇನ್ನು ಕಂಪನಿ ಏಜೆಂಟ್ ಗಳು ಕೃಷಿ ಭೂಮಿಯನ್ನೂ ಖರೀದಿ ಮಾಡಲಿದ್ದಾರೆ. ಇದರಿಂದ ಹಳ್ಳಿಗಳು ನಾಶ ಆಗಲಿದೆ. ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಗಮನಿಸಿ, ರೈತರನ್ನು ಉಳಿಸಲು ಹೀಗಾಗದಂತೆ ತಡೆಯಬೇಕಿದೆ ಎಂದರು. ಎಲ್ಲ ನಾಗರಿಕರಿಂದಲೂ ಬಂದ್ ಯಶಸ್ವಿಗೆ ಸಹಕರಿಸಬೇಕು. ನೈತಿಕ ಬೆಂಬಲ ಅನ್ನಬೇಡಿ, ನೈತಿಕವಾಗಿ ಸಂಪೂರ್ಣವಾಗಿ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.
ನೈತಿಕ ಬೆಂಬಲಕ್ಕೆ ಕಿಡಿಕಾರಿದ ಕೋಡಿಹಳ್ಳಿ:
ಕೋವಿಡ್ ಕಾರಣ ಹೇಳಿ ನೈತಿಕ ಬೆಂಬಲ ಹೇಳ್ತೇವೆ ಅಂದರೆ ಅದು ದೊಡ್ಡ ವಿಷಯ ಅಲ್ಲ. ನೈತಿಕ ಬೆಂಬಲ ಅಲ್ಲ ನೈತಿಕತೆಯಿಂದ ಬೆಂಬಲಿಸಿ. ನೈತಿಕ ಬೆಂಬಲದಿಂದ ಸರಿಯಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವನ್ನು ತಲುಪುವುದಿಲ್ಲ. ಕೊರೊನಾ ನಷ್ಟ ಅಷ್ಟೆ ಅಲ್ಲ ಮುಂದಿನ ದೊಡ್ಡ ಅಪಾಯ ತಡೆಗಟ್ಟಲು ಬೆಂಬಲ ಅಗತ್ಯ ಎಂದರು.
ಬೇರೆ ಬೇರೆ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಬರುವುದಿಲ್ಲ. ಅವರವರದ್ದೇ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಿ. ಅವರ ಜಾಗದ ಹೆದ್ದಾರಿಗಳನ್ನು ತಡೆಯಲಿದ್ದಾರೆ. ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ರ‍್ಯಾಲಿಗಳಿಗೆ ಅವಕಾಶ ಕೊಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸರ್ಕಾರಕ್ಕೆ ನಮ್ಮ ಮನವಿ ಏನಿದೆ ಅದನ್ನು ತಿಳಿಸಬೇಕಿದೆ. ಕೋವಿಡ್ ನೀತಿ ನಿಯಮ ಪಾಲನೆ ಮಾಡಿಕೊಂಡೇ ಬಂದ್ ಮಾಡಲಿದ್ದೇವೆ ಎಂದರು.
ಕಾಂಗ್ರೆಸ್ಗೆ ಎತ್ತಿನಗಾಡಿ, ಕುದುರೆಗಾಡಿಯನ್ನು ವಿಧಾನಸೌಧದ ಒಳಗೂ ಬಿಡುತ್ತೀರಿ, ರೈತರಿಗೆ ಕೇವಲ ಬೀದಿಗೆ ಬಂದು ನ್ಯಾಯ ಕೇಳಲು ಬಿಡುವುದಿಲ್ಲವೇ ಎಂದು ಪ್ರಶ್ನಿಸಿದರು. ಈಗಾಗಲೇ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಹೀಗಾಗಿ ಬಂದ್ ಕ್ರಮಬದ್ಧವಾಗಿ ನಡೆಯಲಿದೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ಬೆಂಗಳೂರು - ಹೈದರಾಬಾದ್, ಪೂನಾ, ಬೆಂಗಳೂರು-ಚೆನ್ನೈ ರಸ್ತೆಯಲ್ಲಿ ಬಂದ್ ಆಗಲಿದೆ. ಎಲ್ಲ ನಾಗರಿಕರು ಸೋಮವಾರ ಪ್ರಯಾಣ ಮಾಡಲು ಮುಂದಾಗುವುದು ಬೇಡ. ರೈತರು ರಸ್ತೆ ತಡೆ ನಡೆಸಲಿದ್ದಾರೆ ಎಂದರು.
ಬಿಜೆಪಿಯ ಕೃಷಿಯ ಅಂಗ ಸಂಸ್ಥೆಯೂ ಕೇಂದ್ರ ಸರ್ಕಾರಕ್ಕೆ ಕಾಯ್ದೆ ಪರಿಶೀಲಿಸುವಂತೆ ಮನವಿ ಮಾಡಿದೆ. ಹೀಗಾಗಿ ಬಿಜೆಪಿಯಲ್ಲೇ ಇರುವ ರೈತರು, ರೈತಪರ ಶಾಸಕರು ಸಚಿವರು ಈ ಚಳವಳಿಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.
ಬಹುತೇಕ ಎಲ್ಲಾ ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಈಗಾಗಲೇ ಬಂದ್ಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಆಟೋ, ಟ್ಯಾಕ್ಸಿ - ಲಾರಿ ಮಾಲೀಕರಿಗೂ, ಮಾಲ್, ವಾಣಿಜ್ಯ ಮಂಡಳಿಗಳಿಗೂ ಮನವಿ ಮಾಡಲಾಗಿದೆ ಎಂದರು.