ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಜನರಲ್ಲಿ ಗೊಂದಲ ಉಂಟುಮಾಡುವುದಲ್ಲದೇ ಕೋಮುವಾದದ ಮೂಲಕ ಜನರನ್ನು ವಿಭಜಿಸುತ್ತಿವೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾ. ಆರ್ ದೇವದಾಸ್ ಅವರು ಈ ಆತಂಕ ಮತ್ತು ಬೇಸರ ವ್ಯಕ್ತಪಡಿಸಿದ್ದು, ಜನರು ಪ್ರಬುದ್ಧರಾಗಿ ಯೋಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜತೆಗೆ ಇಂತಹ ಪ್ರಕರಣಗಳ ಕುರಿತು ನ್ಯಾಯಾಲಯಗಳು ವಿಚಾರಣೆ ನಡೆಸುವಾಗ ಆರೋಪಗಳ ಸತ್ಯಾಸತ್ಯತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಆದೇಶಿಸಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ 19 ವರ್ಷದ ರಿಹಾನ್ ಮತ್ತು 20 ವರ್ಷದ ಶಹಬಾಝ್ ಎಂಬ ಯುವಕರು ಚರಂಡಿಯಿಂದ ಕಲ್ಲಂಗಡಿ ಹಣ್ಣು ಹೆಕ್ಕಿ ತೆಗೆದುಕೊಳ್ಳುವ ದೃಶ್ಯ ವಾಟ್ಸಾಪ್ ನಲ್ಲಿ ಹರಿದಾಡಿತ್ತು. ಈ ಯುವಕರು ಕೊರೊನಾ ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿ ಬಸವೇಶ್ವರ ಚೌಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು.
ಈ ದೂರಿನ ಮೇರೆಗೆ ಕಳೆದ ಏಪ್ರಿಲ್ 17 ರಂದು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇಬ್ಬರು ಯುವಕರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಈ ಇಬ್ಬರು ಯುವಕರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಯುವಕರು ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಯುವಕರು ಕೇವಲ ಒಂದು ಕಲ್ಲಂಗಡಿಯನ್ನು ಚರಂಡಿಯಲ್ಲಿ ಮುಳುಗಿಸಿ ತೆಗೆದು ಮಾರಾಟ ಮಾಡಿದ್ದಾರೆ ಇದರಿಂದ ಜನರಿಗೆ ಕೊರೊನಾ ಹಬ್ಬಿಸುವ ದುರುದ್ದೇಶ ಹೊಂದಿದ್ದಾರೆ ಎಂಬುದನ್ನು ಒಪ್ಪುವುದು ಕಷ್ಟ ಎಂದಿದ್ದು, ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಈ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡಿದ್ದೆಲ್ಲವೂ ಸತ್ಯವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇಂತಹ ವಿಚಾರಗಳನ್ನು ನಂಬುವಾಗ ಸಾಕಷ್ಟು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದಿದೆ.