ಬೆಂಗಳೂರು: ಸುಳ್ಳು ದಾಖಲೆಗಳನ್ನು ಸಲ್ಲಿಸಿ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಚಯಿಸಿರುವ ಮಾತೃ ವಂದನಾ ಯೋಜನೆ ಸೌಲಭ್ಯಗಳನ್ನು ಪಡೆದಿರುವ ಆರೋಪದಲ್ಲಿ ಪತ್ನಿಯ ವಿರುದ್ಧ ಪತಿಯೊಬ್ಬರು ದೂರು ದಾಖಲಿಸಿರುವ ಅಪರೂಪದ ಪ್ರಕರಣವು ಧಾರವಾಡದ ಹೈಕೋರ್ಟ್ ಪೀಠದ ಮೆಟ್ಟಿಲೇರಿದೆ.
ಹೌದು, ಮಲ್ಲಿಕಾರ್ಜುನ ಶಿಸರಂಗಿ ಎಂಬುವರು ಸ್ವತಃ ತಮ್ಮ ಪತ್ನಿ ಸ್ವಾತಿ ಅಲಿಯಾಸ್ ವಾಣಿಶ್ರೀ ವಿರುದ್ಧ ಈ ದೂರು ದಾಖಲಿಸಿದ್ದಾರೆ. ಇದರಿಂದ ಬಂಧನ ಪತ್ನಿ ಸ್ವಾತಿ ಭೀತಿಯಲ್ಲಿದ್ದಾರೆ. ಹೀಗಾಗಿಯೇ ಸ್ವಾತಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸ್ವಾತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠ, ಇತ್ತೀಚೆಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಪರಿಣಾಮ ಸದ್ಯ ಬಂಧನ ಭೀತಿಗೆ ಒಳಗಾಗಿದ್ದ ಸ್ವಾತಿ ನಿಟ್ಟುಸಿರು ಬಿಟ್ಟಂತಾಗಿದೆ.
ಪತಿ ಕೊಟ್ಟ ದೂರಿನಲ್ಲೇನಿದೆ?: ಸ್ವಾತಿ ಅಲಿಯಾಸ್ ವಾಣಿಶ್ರೀ ನನ್ನನ್ನು ವಿವಾಹವಾಗುವುದಕ್ಕೂ ಮುನ್ನ ಮತ್ತೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಆ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆ ಮಗುವಿಗೆ ಶಾಲೆಯಲ್ಲಿ ಪೋಷಕರ ಹೆಸರನ್ನು ಬದಲಿಸಿದ್ದಾರೆ. ಮತ್ತೆ ಇದೀಗ ನನ್ನೊಂದಿಗೆ ವಿವಾಹವಾಗಿದ್ದು, ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ.
ಅಲ್ಲದೇ, ಇದೇ ಮೊದಲ ಮಗು ಎಂದು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸರ್ಕಾರದಿಂದ ಮಾತೃವಂದನಾ ಯೋಜನೆಯಲ್ಲಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ಪತಿ ಮಲ್ಲಿಕಾರ್ಜುನ ಶಿಸರಂಗಿ ಉತ್ತರ ಕನ್ನಡದ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ 2015ರ ಜೂ.1ರಂದು ದೂರು ಸಲ್ಲಿಸಿದ್ದರು.
ಇಷ್ಟೇ ಅಲ್ಲ, ಮೊದಲ ವಿವಾಹ ಮತ್ತು ಮಗುವಿಗೆ ಜನ್ಮ ನೀಡಿರುವ ಅಂಶವನ್ನು ಮರೆಮಾಚಿ ಮತ್ತೊಂದು ಮದುವೆ ಆಗಿರುವುದಲ್ಲದೆ, ಎರಡನೇ ಮಗುವಿಗೆ ಜನ್ಮ ನೀಡಿದ್ದು, ಎರಡನೇ ಬಾರಿಯೂ ಮೊದಲ ಮಗು ಎಂಬುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಶಿರಸಂಗಿ ನೀಡಿದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದರು. ಇದರಿಂದ ಬಂಧನ ಭೀತಿಯಲ್ಲಿದ್ದ ಸ್ವಾತಿ ನಿರೀಕ್ಷಣಾ ಜಾಮೀನು ಕೋರಿ ಧಾರವಾಡದ ಹೈಕೋರ್ಟ್ ಪೀಠದ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರ ವಾದವೇನು?: ದೂರು ದಾಖಲಿಸಿರುವ ಮಲ್ಲಿಕಾರ್ಜುನ ಶಿರಸಂಗಿ, ಅರ್ಜಿದಾರರಾದ ವಾಣಿಶ್ರೀ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ದೂರುದಾರರನ್ನು ಮದುವೆಯಾಗುವುದಕ್ಕೂ ಮುನ್ನ ಮದುವೆ ಆಗಿದ್ದಾರೆ. ಆದರೆ, ಮಗು ಜನಿಸಿದೆ ಎಂಬ ಆರೋಪ ಸುಳ್ಳು. ಅಲ್ಲದೇ, ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಈ ರೀತಿಯ ಸುಳ್ಳು ದೂರು ದಾಖಲಿಸಲಾಗಿದೆ ಎಂದು ವಾಣಿಶ್ರೀ ಪರ ವಕೀಲ ವಾದಿಸಿದ್ದಾರೆ.
ಜೊತೆಗೆ, ಅರ್ಜಿದಾರರು ಯಲ್ಲಾಪುರದ ಖಾಯಂ ನಿವಾಸಿಯಾಗಿದ್ದು, ವಿಚಾರಣೆಗೆ ಅಗತ್ಯವಿಲ್ಲವಾಗಿರುವುದಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು ವಕೀಲರು ಮನವಿ ಮಾಡಿದರು. ಈ ಅಂಶ ಪುರಸ್ಕರಿಸಿದ ನ್ಯಾಯಪೀಠ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯದ ಷರತ್ತುಗಳು: 50 ಸಾವಿರ ಶ್ಯೂರಿಟಿ, ಖಾಯಂ ವಿಳಾಸದ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಬೇಕು. ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಅನುಮತಿ ಇಲ್ಲದೇ ಹೊರ ಹೋಗುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಇತರ ಆರೋಪಿಗಳಿಗೂ ನಿರೀಕ್ಷಣಾ ಜಾಮೀನು: ಇದೇ ಆರೋಪ ಸಂಬಂಧ ಪ್ರಕರಣದ ಇತರ ಆರೋಪಿಗಳಾಗಿದ್ದ ವೀಣಾ, ನಿತೀಶ್, ಗೀತಾ, ರಾಜೇಶ್ ಎಂಬುವವರಿಗೆ ನ್ಯಾ.ಶಿವಶಂಕರ್ ಅಮರಣ್ಣನವರ್ ಅವರಿದ್ದ ಮತ್ತೊಂದು ಪೀಠ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ: ಧಾರವಾಡ: ವಿಚ್ಛೇದನ ಕೋರಿ ಬಂದು ಮತ್ತೆ ಒಂದಾಗಿ ನಡೆದ 17 ದಂಪತಿಗಳು