ಬೆಂಗಳೂರು: ನಿನ್ನೆ ಸಂಜೆ ವೇಳೆಗೆ ಸುರಿದ ಭಾರೀ ಮಳೆಗೆ ಕೆಂಗೇರಿ ಬಳಿ ವೃಷಭಾವತಿ ನದಿಯ ತಡೆಗೋಡೆ ಕುಸಿದು ಬಿದ್ದು, ರಸ್ತೆ ಕೊರೆತ ಉಂಟಾಗಿದೆ. ಇಂದು ಮೇಯರ್, ಬಿಬಿಎಂಪಿ ಆಯುಕ್ತರು, ಮೆಟ್ರೋ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಸಿಟಿ ಮುನ್ಸಿಪಲ್ ಕಾರ್ಪೊರೇಷನ್ ಇದ್ದ ಸಮಯದಲ್ಲಿ ಈ ಗೋಡೆ ನಿರ್ಮಾಣವಾಗಿದ್ದು, ಹಳೆಯದಾಗಿದ್ದರಿಂದ ಮಳೆ ರಭಸಕ್ಕೆ ಗೋಡೆ ಕುಸಿದಿದೆ. ರಸ್ತೆ ಕೂಡಾ ಹಾಳಾಗಿದ್ದು, ಸದ್ಯ ವಾಹನಗಳ ಓಡಾಟಕ್ಕೆ ಪರ್ಯಾಯ ರಸ್ತೆ ವ್ಯಸವ್ಥೆ ಮಾಡಲಾಗಿದೆ. ರಸ್ತೆ ಕುಸಿಯದಂತೆ ಮರಳು ಮೂಟೆ ಹಾಕಿ, ನೀರಿನ ಹರಿವಿನ ಮಾರ್ಗ ಬದಲಾಯಿಸಲು ಸೂಚಿಸಲಾಗಿದೆ ಎಂದರು.
ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ತುರ್ತಾಗಿ ಇದಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಚೀಫ್ ಇಂಜಿನಿಯರ್ ಕಬಾಡೆ ಅವರಿಗೆ ಕೂಡಲೇ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಮಾತನಾಡಿ, ನೀರಿನ ಒತ್ತಡಕ್ಕೆ ಹಳೆಗೋಡೆಯಾಗಿದ್ದರಿಂದ ಕುಸಿದಿದೆ. ಹರಿಯುತ್ತಿರುವ ನೀರಿನಿಂದ ರಸ್ತೆ ಕೊರೆಯದ ಹಾಗೆ, ನೀರನ್ನು ಬೇರೆಡೆಗೆ ಮಾರ್ಗ ಬದಲಾಯಿಸಿ, ಕಾಮಗಾರಿ ಆರಂಭಿಸಲಾಗುವುದು ಎಂದರು.