ಬೆಂಗಳೂರು: ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರೆನ್ನಲಾದವರಿಂದ ನಕಲಿ ವೋಟರ್ ಐಡಿ ತಯಾರಿಕೆ ಪ್ರಕರಣ ಕುರಿತಂತೆ ನಗರದಲ್ಲಿ ಮಧ್ಯರಾತ್ರಿವರೆಗೆ ನಗರ ಆಯುಕ್ತ ಹಾಗೂ ಚುನಾವಣಾ ಜಿಲ್ಲಾಧಿಕಾರಿಗಳು ಶೋಧ ಕಾರ್ಯ ನಡೆಸಿ 16 ಜನ ಡೇಟಾ ಆಪರೇಟರ್ಗಳನ್ನ ವಶಕ್ಕೆ ಪಡೆದಿದ್ದಾರೆ.
2019 ರ ಲೋಕಸಭಾ ಎಲೆಕ್ಷನ್ ರಣಾಂಗಣದ ರಾಜಕೀಯ ನಾಟಕ ಜೋರಾಗಿ ಸದ್ದು ಮಾಡುತ್ತಿವೆ. ಗೆಲುವಿನ ಗುರಿಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಅಂತಹ ಕಸರತ್ತಿಗೆ ಕೈ ಹಾಕಿದ ಅಭ್ಯರ್ಥಿಯೊಬ್ಬರ ಬೆಂಬಲಿಗರು ಏನೋ ಮಾಡಲು ಹೋಗಿ ಅದು ಮತ್ತೊಂದಾಗಿ ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಕಲಿ ವೋಟರ್ ಐಡಿ ತಯಾರಿಕೆಯಲ್ಲಿ ತೊಡಗಿ ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಸುದ್ದಿಯಾಗಿದ್ದರು. ಆದರೆ ಈಗ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸರತಿ. ಇಬ್ರಾಹಿಂ ಖಲೀಮುಲ್ಲಾ ಎಂಬುವವರಿಗೆ ಸೇರಿದ್ದ ಪ್ರಭಾತ್ ಕಾಂಪ್ಲೆಕ್ಸ್ನಲ್ಲಿ ರಾತ್ರಿ 7:30ಕ್ಕೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಮತದಾರರ ಪಟ್ಟಿ, ಬಿಲ್ಲಿಂಗ್ ಮೆಷಿನ್, ಕಂಪ್ಯೂಟರ್ಸ್, ಪ್ರಿಂಟರ್ ಸೇರಿದಂತೆ ಕಾಂಗ್ರೆಸ್ ಮುಖಂಡ ಖಲೀಮುಲ್ಲಾ ಜೊತೆಗೆ 16 ಜನ ಡೇಟಾ ಆಪರೇಟರ್ಗಳನ್ನ ವಶಕ್ಕೆ ಪಡೆದಿದ್ದಾರೆ. ಇಷ್ಟು ಜನರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ವೇಳೆ ಡೇಟಾ ಆಪರೇಟರ್ಸ್ಗಳು ಇದು ಕೇಂದ್ರ ಮೈತ್ರಿ ಅಭ್ಯರ್ಥಿಗೆ ಸಂಬಂಧಪಟ್ಟಿದ್ದು ಅಂತ ಪೊಲೀಸರಿಗೆ ಮತ್ತು ಚುನಾವಣಾಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮತದಾರರ ಪಟ್ಟಿಯಲ್ಲಿ ಯಾರು ಮತ ಚಲಾವಣೆ ಮಾಡುತ್ತಿಲ್ಲವೋ ಅಂತವರನ್ನ ಗುರುತಿಸಿ ಮೈತ್ರಿ ಅಭ್ಯರ್ಥಿ ಪರವಾಗಿ ಮತದಾನ ಮಾಡಿಸುವ ನಿಟ್ಟಿನಲ್ಲಿ ದೊಡ್ಡ ಪ್ಲಾನ್ ಮಾಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಡೇಟಾ ಆಪರೇಟರ್ಗಳನ್ನ ನೇಮಕ ಮಾಡಿ ವೋಟರ್ ಪಟ್ಟಿಯನ್ನ ನೀಡಿದ್ದಾರೆ. ಅದರಲ್ಲಿ ಯಾರು ಎರಡು ಮೂರು ಬಾರಿ ಮತ ಚಲಾವಣೆ ಮಾಡಿಲ್ಲವೋ ಅಂತವರನ್ನ ಟಾರ್ಗೆಟ್ ಮಾಡಿ ಮೈತ್ರಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವಂತೆ ಪ್ಲಾನ್ ಮಾಡಲಾಗಿತ್ತು. ಅದರಂತೆ ಚೀಟಿಗಳ ಮೇಲೆ ಅಭ್ಯರ್ಥಿಯ ಭಾವಚಿತ್ರಗಳನ್ನ ಅಂಟಿಸಲಾಗಿದೆ. ಹೀಗಾಗಿ ಅಭ್ಯರ್ಥಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಪ್ರಭಾತ್ ಕಾಂಪ್ಲೆಕ್ಸ್ನ್ನೂ ಸೀಜ್ ಮಾಡಲಾಗಿದೆ. ಮತ್ತೆ ಮರು ಪರಿಶೀಲನೆ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇನ್ನು ಬಿಬಿಎಂಪಿ ಆಯುಕ್ತ ಹಾಗು ನಗರ ಜಿಲ್ಲೆ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮಾತನಾಡಿ, ದಾಖಲೆಗಳು ಕಾಂಗ್ರೇಸ್ ಅಭ್ಯರ್ಥಿಗೆ ಸೇರಿದೆ ಎಂದು ತಿಳಿದು ಬಂದಿದೆ. ಮತ್ತಷ್ಟು ತನಿಖೆ ನಡೆಯಲಿದೆ ಎಂದರು. ಅಕ್ರಮ ವಸ್ತುಗಳನ್ನ ವಶಕ್ಕೆ ಪಡೆದಿರುವ ಉಪ್ಪಾರಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.