ಬೆಂಗಳೂರು: ನಗರದಲ್ಲಿ ಜಾಲಿರೈಡ್ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದ ನಕಲಿ ಪೊಲೀಸ್ನನ್ನು ಹೆಬ್ಬಾಳ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೋಳನಾಯಕನಹಳ್ಳಿ ನಿವಾಸಿ ನರೇಶ್ ಅಲಿಯಾಸ್ ಗುರುನರೇಶ್ ಬಂಧಿತ ಆರೋಪಿ. ಈತ ಹೆಬ್ಬಾಳ ಮಾರ್ಗವಾಗಿ ಏರ್ಪೋರ್ಟ್ ರಸ್ತೆಯಿಂದ ನಂದಿ ಹಿಲ್ಸ್ ಕಡೆ ಜಾಲಿರೈಡ್ ಹೋಗುವ, ಒಂಟಿಯಾಗಿ ಸಂಚರಿಸೋ ಮಹಿಳೆಯರ ವಾಹನಗಳನ್ನು ಅಡ್ಡಗಟ್ಟುತ್ತಿದ್ದನಂತೆ. ಬಳಿಕ ತಾನು ಪೊಲೀಸ್ ಎಂದು ಹೇಳಿ ಸುಲಿಗೆ ಮಾಡುತ್ತಿದ್ದ ಎಂಬ ವಿಚಾರ ಆರೋಪಿಯ ವಿಚಾರಣೆ ವೇಳೆ ಬಯಲಾಗಿದೆ.
ಸದ್ಯ ಯುವತಿಯೊಬ್ಬಳನ್ನು ಚುಡಾಯಿಸಿ ಸುಲಿಗೆ ಮಾಡಲು ಹೋದಾಗ, ಯುವತಿಯು ವಿಡಿಯೋ ಮಾಡಿ ಹೆಬ್ಬಾಳ ಪೊಲೀಸರಿಗೆ ನೀಡಿದ್ದಳು. ಇನ್ನು ತನಿಖೆ ವೇಳೆ ಆರೋಪಿಯು ತಡರಾತ್ರಿ ಬೈಕ್ ಅಥವಾ ಕಾರಿನಲ್ಲಿ ಒಂಟಿಯಾಗಿ ಹೋಗುವ ಮಹಿಳೆಯರನ್ನು ಚೇಸ್ ಮಾಡಿ, ನಂತರ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ ಯುವತಿಯರ ವಾಹನಗಳನ್ನು ಅಡ್ಡಗಟ್ಟುತ್ತಿದ್ದ. ನಂತರ ಯುವತಿಯರನ್ನು ನಡುರಸ್ತೆಯಲ್ಲಿ ಚುಡಾಯಿಸಿ ಪೊಲೀಸರಿಗೆ ಕರೆಮಾಡಲು ಮುಂದಾದ್ರೆ ನಾನೇ ಪೊಲೀಸ್ ಅಂತಾ ಹೇಳಿ ದುಡ್ಡು ಸುಲಿಗೆ ಮಾಡ್ತಿದ್ದ ವಿಚಾರ ಬಾಯಿ ಬಿಟ್ಟಿದ್ದಾನೆ. ಇನ್ನು ಆರೋಪಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.