ಬೆಂಗಳೂರು: ಇಂದು ಬೆಳಿಗ್ಗೆ ಬೆಂಗಳೂರು ಹಾಗೂ ಬೆಂಗಳೂರು ಹೊರವಲಯದ ಹಲವು ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಬನ್ನೇರುಘಟ್ಟದ ಏಳು, ಹೆಬ್ಬಗೋಡಿಯ ನಾಲ್ಕು, ಸರ್ಜಾಪುರದ ಐದು, ಜಿಗಣಿಯ ಎರಡು ಖಾಸಗಿ ಶಾಲೆ ಸೇರಿದಂತೆ ಆನೇಕಲ್ ತಾಲೂಕಿನ ಒಟ್ಟು 18 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಈ ಹುಸಿ ಬಾಂಬ್ ಬೆದರಿಕೆ ಕರೆ ರವಾನೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರಿನ ಉತ್ತರ ವಲಯ 1ರಲ್ಲಿ 4 ಶಾಲೆಗಳಿಗೆ, ಉತ್ತರ ವಲಯ 2ರಲ್ಲಿ 2 ಶಾಲೆಗಳಿಗೆ, ಉತ್ತರ ವಲಯ 4ರಲ್ಲಿ 01 ಶಾಲೆ, ದಕ್ಷಿಣ ವಲಯ 1ರಲ್ಲಿ 15 ಶಾಲೆ, ದಕ್ಷಿಣ ವಲಯ 2ರಲ್ಲಿ 03 ಶಾಲೆಗಳು, ದಕ್ಷಿಣ ವಲಯ 3ರಲ್ಲಿ 10 ಶಾಲೆಗಳು, ದಕ್ಷಿಣ ವಲಯ 4ರಲ್ಲಿ 04 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.
ಬನ್ನೇರುಘಟ್ಟ ಸಮೀಪದ ದಿನ್ನೇಪಾಳ್ಯದ ಗ್ರೀನ್ ಹುಡ್ ಹೈಸ್ಕೂಲ್, ಗ್ಲೋಬಲ್ ಇಂಟರ್ನ್ಯಾಷನಲ್ ಶಾಲೆ, ರಾಯನ್ ಇಂಟರ್ನ್ಯಾಷನಲ್ ಶಾಲೆ, ಆಲ್ ಬಷೀರ್ ಶಾಲೆ, ದೀಕ್ಷಾ ಹೈಟ್ ಶಾಲೆ, ಕಾಂಡರ್ ಇಂಟರ್ನ್ಯಾಷನಲ್ ಶಾಲೆ ಮತ್ತು ಬಿವಿಎಂ ಗ್ಲೋಬಲ್ ಶಾಲೆಗೆ ಹುಸಿ ಬಾಂಬ್ ಕರೆ ರವಾನೆಯಾದರೆ, ಹೆಬ್ಬಗೋಡಿಯ ಡಿವೈನ್ ಇಂಟರ್ನ್ಯಾಷನಲ್ ಶಾಲೆ, ಟ್ರೀಮೈಸ್ ಇಂಟರ್ನ್ಯಾಷನಲ್ ಶಾಲೆ, ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ, ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ ಸೇರಿ ಸೇರಿ ಇಲ್ಲಿ ಒಟ್ಟು ನಾಲ್ಕು ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿದೆ. ಸರ್ಜಾಪುರದ ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್, ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ, ಓಕರಿಡ್ಜ್ ಶಾಲೆ, ಟಿಐಎಸ್ಬಿ ಶಾಲೆ, ಇನ್ವೆಂಚರ್ ಅಕಾಡೆಮಿ, ಜಿಗಣಿಯ ಅಚೀವರ್ಸ್ ಅಕಾಡೆಮಿ ಮತ್ತು ಎನ್ಡೆವರ್ಸ್ ಅಕಾಡೆಮಿ ಶಾಲೆಗೆ ಹುಸಿ ಬಾಂಬ್ ಕರೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆನೇಕಲ್ ತಾಲೂಕಿನ 18 ಶಾಲೆ ಸೇರಿ ಒಟ್ಟು 44 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.
ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ಪೋಷಕರು ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋದರು. ಆಗಂತುಕರು ಯಾವ ಕಾರಣಕ್ಕಾಗಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಾಲೆಗಳ ಇಮೇಲ್ ಸಹ ಪರಿಶೀಲಿಸಲಾಗುತ್ತಿದೆ.
ಹುಸಿ ಬಾಂಬ್ ಬೆದರಿಕೆ ಕರೆ ಕುರಿತು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪ್ರತಿಕ್ರಿಯಿಸಿ, ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಹಾಗೂ ಸ್ಕ್ವೈಡ್‌ಗಳನ್ನು ಕಳುಹಿಸಿ ತಪಾಸಣೆ ನಡೆಸಲಾಗುತ್ತದೆ. ಕಟ್ಟೆಚ್ಚರ ವಹಿಸುವಂತೆ ಸಚಿವರು ನಿರ್ದೇಶಿಸಿದ್ದಾರೆ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಕಳೆದ ವರ್ಷ ಕೂಡಾ ಬೆದರಿಕೆ ಬಂದಿತ್ತು. ಆಗ ನಮ್ಮ ಸಿಬ್ಬಂದಿ ಎಚ್ಚೆತ್ತುಕೊಂಡು ಆರೋಪಿಗಳನ್ನು ಪತ್ತೆ ಮಾಡಿದ್ದರು. ಅವುಗಳೆಲ್ಲವೂ ಹುಸಿ ಬೆದರಿಕೆ ಕರೆಗಳಾಗಿದ್ದವು. ಈ ಪ್ರಕರಣವನ್ನೂ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ನಗರ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಬಾಂಬ್ ಬೆದರಿಕೆಯ ಇಮೇಲ್ ಬಗ್ಗೆ ಪರಿಶಿಲೀಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮತ್ತು ಮಕ್ಕಳು ಆತಂಕಪಡುವುದು ಬೇಡ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ- ಗೃಹ ಸಚಿವ ಜಿ.ಪರಮೇಶ್ವರ್