ಬೆಂಗಳೂರು: ಬಿಬಿಎಂಪಿ ಮುಖ್ಯ ಇಂಜಿನಿಯರ್ ಎಂದು ಹೇಳಿಕೊಂಡು ಸಾಕಷ್ಟು ಮಂದಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಪರಮೇಶ್ ಬಂಧಿತ ಆರೋಪಿ.
ಇತ್ತೀಚೆಗೆ ಸಿಎಂ ಗೃಹ ಕಚೇರಿ ಕೃಷ್ಣಾಗೆ ಬಂದು ಬಂದೋಬಸ್ತ್ಗೆ ನೇಮಿಸಿದ್ದ ಪೊಲೀಸರ ಬಳಿ ಬಂದ ಈತ, ಸಿಎಂ ಆಪ್ತ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ನನ್ನನ್ನು ಕರೆದಿದ್ದಾರೆ. ಸಿಎಂ ಅವರನ್ನು ಭೇಟಿಯಾಗಬೇಕು. ನನ್ನನ್ನು ಮುಖ್ಯಮಂತ್ರಿಗಳು ಪರ್ಸನಲ್ ಸೆಕ್ರೆಟರಿ ಆಗಿ ನೇಮಿಸಿಕೊಳ್ಳಬೇಕು ಅಂತಿದ್ದಾರೆ. ನಾನೀಗ ಬಿಬಿಎಂಪಿ ಚೀಫ್ ಇಂಜಿನಿಯರ್ ಅಂತ ನಕಲಿ ಐಡಿ(ಗುರುತಿನ ಚೀಟಿ) ತೋರಿಸಿದ್ದಾನೆ. ಐಡಿ ನೋಡುತ್ತಿದಂತೆ ಇದು ನಕಲಿ ಎನ್ನುವುದನ್ನು ಖಚಿತಪಡಿಸಿಕೊಂಡ ಪೊಲೀಸರು, ಪರಮೇಶ್‌ನನ್ನು ಹೈಗ್ರೌಂಡ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಆರೋಪಿಯನ್ನು ವಿಚಾರಣೆ ನಡೆಸಿ, ಮೊಬೈಲ್ ಪರಿಶೀಲಿಸಿದಾಗ ಹಲವು ಯುವತಿಯರು, ಮಹಿಳೆಯರ ಜೊತೆ ಚಾಟ್ ಮಾಡಿರುವುದು ಗೊತ್ತಾಗಿದೆ. ಅದರಲ್ಲೂ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಸರ್ಕಾರಿ ಮಹಿಳಾ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಮಾಡಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಬೇರೆ ಕಡೆ ಪೋಸ್ಟಿಂಗ್ ಮಾಡಿಸುತ್ತೇನೆ, ಟೆಂಡರ್ ಕೊಡಿಸುತ್ತೇನೆ ಎಂದು ಸಾಕಷ್ಟು ಜನರಿಗೆ ವಂಚಿಸಿದ್ದಾನೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದರು.
ಇದನ್ನೂ ಓದಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸ್ವಾಮೀಜಿ ವೇಷದಲ್ಲಿ ಮೋಸಗೈದ ಆರೋಪಿ ಬಂಧನ