ಬೆಂಗಳೂರು: ನಕಲಿ ಅಂಕಪಟ್ಟಿ ಜಾಲ ರಾಜಧಾನಿಯಲ್ಲಿ ನಾಯಿಕೊಡೆಯಂತೆ ಬೆಳೆದು ಕೊಂಡಿದೆ. ಅಲ್ಲಲ್ಲಿ ರಾಜ್ಯ ಹಾಗೂ ಅಂತರ ರಾಜ್ಯದ ವಿಶ್ವ ವಿದ್ಯಾಲಯಗಳ ಅಂಕಪಟ್ಟಿಗಳು ಸಾರಾಸಗಟಾಗಿ ಸಿಗುತ್ತಿದೆ. ಈ ಹಿಂದೆ ಡಿಸೆಂಬರ್ನಲ್ಲಿ ಬೆಂಗಳೂರಿನ ಪೊಲೀಸ್ ಪಡೆ ವೆಂಕಟೇಶ್ವರ ಇನ್ಸಿಟಿಟ್ಯೂಟ್ ಸಂಸ್ಥೆಯ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದರು. ರಾಜ್ಯ, ಹೊರರಾಜ್ಯದ ವಿವಿಧ ಯೂನಿವರ್ಸಿಟಿಗಳ ವಿವಿಧ ಕೋರ್ಸುಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದ ಐದು ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಎಜುಕೇಶನ್ ಕನ್ಸಲ್ಟೆನ್ಸಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ರಾಜಾಜಿ ನಗರದ ಕ್ವೆಸ್ಟ್ ಟೆಕ್ನಾಲಜೀಸ್, ಜೆ.ಪಿ.ನಗರದ ಸಿಸ್ಟಂ ಕ್ವೆಸ್ಟ್, ಭದ್ರಪ್ಪ ಲೇಔಟಿನ ಆರೋಹಿ ಇನ್ಸಿಟಿಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್ ಹಾಗೂ ವಿಜಯನಗರದ ಬೆನಕಾ ಕರೆಸ್ಪಾಡೆನ್ಸ್ ಕಾಲೇಜ್ ಮೇಲೆ ದಾಳಿ ನಡೆಸಲಾಗಿದ್ದು, ವಿಕಾಸ್ ಭಾಗವತ್ ಎಂಬಾತನನ್ನು ಬಂಧಿಸಲಾಗಿದೆ.
6,800ಕ್ಕೂ ಅಧಿಕ ನಕಲಿ ಅಂಕಪಟ್ಟಿಗಳು ವಶಕ್ಕೆ: ಈ ಹಿಂದೆ ನಕಲಿ ಅಂಕಪಟ್ಟಿ ಜಾಲದ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಆರೋಪಿಗಳ ಮಾಹಿತಿಯನ್ವಯ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಅದರನ್ವಯ ಐದು ನಕಲಿ ಅಂಕಪಟ್ಟಿ ನೀಡುತ್ತಿದ್ದ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ಸಂದರ್ಭದಲ್ಲಿ ಆರೋಪಿತ ಸಂಸ್ಥೆಗಳ ಬಳಿ ಅಣ್ಣಾಮಲೈ ಯೂನಿವರ್ಸಿಟಿ, ಸಿಕ್ಕಿಂ ಯೂನಿವರ್ಸಿಟಿ, ಗೀತಂ ಯೂನಿವರ್ಸಿಟಿ, ಕುವೆಂಪು ಯೂನಿವರ್ಸಿಟಿ, ಜೈನ್ ವಿಹಾರ್ ಯೂನಿವರ್ಸಿಟಿ, ಮಂಗಳೂರು ಯೂನಿವರ್ಸಿಟಿ, ಬೆಂಗಳೂರು ಯೂನಿವರ್ಸಿಟಿ ಸೇರಿದಂತೆ ಹದಿನೈದು ವಿವಿಧ ಯೂನಿವರ್ಸಿಟಿಗಳ 6,846 ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಆಯಾ ಯೂನಿವರ್ಸಿಟಿಗಳಿಗೆ ಅಂಕಪಟ್ಟಿಗಳನ್ನ ಕಳುಹಿಸಿ ಅವುಗಳು ನಕಲಿ ಎಂಬ ಮಾಹಿತಿ ಪಡೆದಿರುವ ಸಿಸಿಬಿ ಪೊಲೀಸರು, ಆರೋಪಿ ಸಂಸ್ಥೆಗಳ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಯಾರಿಗೂ ನೀಡದೇ ಹಳೆಯ ವರ್ಷಗಳ ಅಂಕಪಟ್ಟಿಗಳೂ ಸಹ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ನಕಲಿ ಅಂಕಪಟ್ಟಿಗಳನ್ನು ಬಳಸಿ ಕೆಲವರು ಹುದ್ದೆ, ಮುಂಬಡ್ತಿ ಸಹ ಪಡೆದಿರಬಹುದಾದ ಸಾಧ್ಯತೆಯಿದ್ದು ತನಿಖೆ ನಡೆಸಲಾಗುತ್ತಿದೆ. ಸದ್ಯ ಆರೋಪಿತ ಸಂಸ್ಥೆಗಳ ಬಳಿಯಿದ್ದ 22 ಲ್ಯಾಪ್‌ಟಾಪ್‌ಗಳು, 1 ಪ್ರಿಂಟರ್, 13 ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಇಂತಹ ಯಾವುದೇ ಶಿಕ್ಷಣ ಸಂಸ್ಥೆಗಳ ಕುರಿತು ಮಾಹಿತಿ ಇದ್ದರೆ ತಿಳಿಸುವಂತೆ ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಎಂಟು ವಿದ್ಯಾರ್ಥಿಗಳ ಅಂಟಕ ಪಟ್ಟಿ ನಕಲಿ ಎಂಬುದು ತಿಳಿದು ಬಂದಿತ್ತು. ಡಿಸೆಂಬರ್ನಲ್ಲಿ ವೆಂಕಟೇಶ್ವರ ಇನ್ ಸ್ಟಿಟ್ಯೂಟ್ ಸಂಸ್ಥೆಯ ಮೇಲೆ ದಾಳಿ ಮಾಡಿದಾಗಲೂ ಉತ್ತರ ಭಾರತದ ಹಲವು ವಿವಿಗಳ ಅಂಕಪಟ್ಟಿಗಳು ದೊರೆತಿದ್ದವು. ವೆಂಕಟೇಶ್ವರ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿತ್ತು.
ಉತ್ತರ ವಿವಿಯಲ್ಲಿ 2021ರಲ್ಲಿ ಸುಮಾರು 40ಕ್ಕೂ ವಿದ್ಯಾರ್ಥಿಗಳಲ್ಲಿ ನಕಲಿ ಅಂಕಪಟ್ಟಿ ದೊರೆತಿರುವುದು ವರದಿಯಾಗಿದೆ. ಹೊರ ರಾಜ್ಯಗಳ ಶಿಕ್ಷಣ ಸಂಸ್ಥೆಯ ಅಂಕ ಪಟ್ಟಿಯನ್ನು ನೀಡಿ ಸೇರುವುದು ಬೆಳಕಿಗೆ ಬಂದಿತ್ತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯ ಅಂಕಪಟ್ಟಿಗಳೂ ಸಹ ನಕಲಿಯಾಗಿದ್ದು ದೊರೆತಿತ್ತು. ಖಾಸಗಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಕಾಲೇಜುಗಳ ಅಂಕಪಟ್ಟಿಗಳು ಹೆಚ್ಚಾಗಿ ಬೆಳಕಿಗೆ ಬಂದಿತ್ತು. ಇಂದು ದೊರೆತಿರುವ ಐದು ಸಂಸ್ಥೆಗಳಲ್ಲಿ ವಿಶ್ವ ವಿದ್ಯಾಲಯಗಳ ಅಂಕ ಪಟ್ಟಿಗಳೇ ಹೆಚ್ಚಾಗಿ ದೊರೆತಿದೆ.
ಇದನ್ನೂ ಓದಿ: ಹಣ ಕೊಟ್ಟರೆ ಇಲ್ಲಿ ಸಿಗುತ್ತೆ ಫೇಕ್ ಮಾರ್ಕ್ಸ್ ಕಾರ್ಡ್.. ಅಕ್ರಮ ಜಾಲ ಪತ್ತೆ ಹಚ್ಚಿದ ಸಿಸಿಬಿ