ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ವಾಸ್ತವದಲ್ಲಿ ಚುರುಕು ಮುಟ್ಟುವ ಬದಲು ಆಡಳಿತ ನಿಂತಲ್ಲೇ ನಿಂತು ಹೋಗಿದೆ. ಬೊಮ್ಮಾಯಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಸಿಗಬೇಕಾದ ವೇಗ ನೀಡುವಲ್ಲಿ ಎಡವಿದೆ ಎಂಬುದು ಗೊತ್ತಾಗುತ್ತಿದೆ.
ವಿಶ್ವ ಬ್ಯಾಂಕ್, ಏಷಿಯಾ ಅಭಿವೃದ್ಧಿ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ರಾಜ್ಯ ಸರ್ಕಾರ ಹಲವು ಬಾಹ್ಯಾನುದಾನ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಸದ್ಯ ಐದು ಇಲಾಖೆಗಳು ಬಾಹ್ಯಾನುದಾನ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಆದರೆ, ಬಾಹ್ಯಾನುದಾನ ಯೋಜನೆಗಳ ಪ್ರಗತಿಯಲ್ಲಿ ರಾಜ್ಯ ಸರ್ಕಾರ ಮಂದಗತಿಯಿಂದ ಸಾಗುತ್ತಿದೆ.
ಬಾಹ್ಯಾನುದಾನ ಯೋಜನೆ ಪ್ರಗತಿ ಶೇ22.64ರಷ್ಟು: ರಾಜ್ಯ ಸರ್ಕಾರ ಬಾಹ್ಯಾನುದಾನಗಳ ಮೂಲಕ ಲೋಕೋಪಯೋಗಿ, ಇಂಧನ, ನಗರಾಭಿವೃದ್ಧಿ, ಕೃಷಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಆದರೆ ಅಕ್ಟೋಬರ್ವರೆಗಿನ ಬಾಹ್ಯಾನುದಾನ ಯೋಜನೆಯ ಪ್ರಗತಿ ಆಗಿದ್ದು ಕೇವಲ ಶೇ 22.64ರಷ್ಟು ಮಾತ್ರ.
2022-23 ಸಾಲಿನಲ್ಲಿ ಬಾಹ್ಯಾನುದಾನ ಯೋಜನೆಗಳಿಗೆ ಒಟ್ಟು ಹಂಚಿಕೆಯಾದ ಅನುದಾನ 4,521.43 ಕೋಟಿ ರೂ. ಈ ಪೈಕಿ ಈವರೆಗೆ ಕೇವಲ 833.35 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಒಟ್ಟು 1,023.64 ಕೋಟಿ ರೂ. ಅನುದಾನ ವೆಚ್ಚವಾಗಿದೆ. ಒಟ್ಟು ಅನುದಾನ ಹಂಚಿಕೆಯ ಎದುರು ಅಕ್ಟೋಬರ್ವರೆಗೆ ಆಗಿರುವ ವೆಚ್ಚ ಶೇ 22.64ರಷ್ಟು ಎಂದು ಸಾಂಖ್ಯಿಕ ಇಲಾಖೆ ಮಾಹಿತಿ ನೀಡಿದೆ.
ಯಾವ ಯೋಜನೆಗಳ ಪ್ರಗತಿ ಕುಂಠಿತ?: ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ಯೋಜನೆ ಕೆಶಿಪ್-3 ಎಡಿಬಿ ಸಾಲದ ಮೂಲಕ ಜಾರಿ ಮಾಡಲಾಗುತ್ತಿದೆ. ಈವರೆಗೆ ಆಗಿರುವ ಆರ್ಥಿಕ ಪ್ರಗತಿ ಶೇ21.21ರಷ್ಟು ಮಾತ್ರ.
ಇನ್ನು ಇಂಧನ ಇಲಾಖೆಯಡಿ ಎಡಿಬಿ ಸಾಲದ ಮೂಲಕ ಬೆಂಗಳೂರು ಸ್ಮಾರ್ಟ್ ಎನರ್ಜಿ ಎಫಿಷಿಯಂಟ್ ಪವರ್ ಡಿಸ್ಟ್ರಿಬ್ಯೂಷನ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ ಈವರೆಗೆ ಆಗಿರುವ ಪ್ರಗತಿ ಕೇವಲ ಶೇ31ರಷ್ಟು. ಇತ್ತ ಕೃಷಿ ಇಲಾಖೆಯಡಿ ವಿಶ್ವ ಬ್ಯಾಂಕ್ ಆರ್ಥಿಕ ಸಹಾಯದಡಿ ಕೈಗೆತ್ತಿಕೊಳ್ಳಲಾಗುತ್ತಿರುವ ನಾವಿನ್ಯ ಅಭಿವೃದ್ಧಿ ಮೂಲಕ ಕೃಷಿ ಅಭಿವೃದ್ಧಿಗಾಗಿ ಜಲಾನಯನ ಪ್ರದೇಶಗಳ ಪುನಶ್ಚೇತನ ಯೋಜನೆಯ ಈವರೆಗಿನ ಆರ್ಥಿಕ ಪ್ರಗತಿ ಸಾಧಿಸಿದ್ದು, ಕೇವಲ ಶೇ25ರಷ್ಟು ಮಾತ್ರ.
ಇದನ್ನೂ ಓದಿ: ಹನಿ ನೀರಾವರಿ ಯೋಜನೆ ಯಾರಿಗೆ ಉಪಯೋಗ, ಅರ್ಜಿ ಸಲ್ಲಿಸುವುದು ಹೇಗೆ?